ಮಸ್ಕಿ(ರಾಯಚೂರು): ಎನ್‌ಆರ್‌ಬಿಸಿ 5ಎ ಕಾಲುವೆ ನಿರ್ಮಾಣಕ್ಕೆ ಒತ್ತಾಯಿಸಿ ಮಸ್ಕಿ ಪಟ್ಟಣ ಬಂದ್ ಮಾಡಿ, 5ಎ ಕಾಲುವೆ ಹೋರಾಟ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳು ಹೋರಾಟ ನಡೆಸಿವೆ.
ಪಟ್ಟಣದ ಪ್ರವಾಸಿ ಮಂದಿರದಿಂದ ಅಂಬೇಡ್ಕರ್ ಪ್ರತಿಮೆವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಹೋರಾಟವನ್ನು ತೀವ್ರಗೊಳಿಸಿದರು. ಎನ್‌ಆರ್‌ಬಿಸಿ 5ಎ ಕಾಲುವೆ ನಿರ್ಮಾಣ ಮಾಡುವುದರಿಂದ ಮಸ್ಕಿ ತಾಲೂಕಿನ ಪಾಮನಕಲ್ಲೂರು, ಅಮೀನಗಡ, ಕೋಟೆಕಲ್, ನೆಲಕೊಳ್ಳ, ಯಟಗಲ್, ಕಾಚಾಪುರ, ವಟಗಲ್ ಸೇರಿದಂತೆ ಸುಮಾರು 58 ಗ್ರಾಮಗಳ ರೈತರ ಸಾವಿರಾರು ಎಕರೆಯ ಹೊಲಗಳಿಗೆ ನೀರು ದೊರೆಯಲಿದೆ.
ಇದರಿಂದ ರೈತರ ಕೃಷಿ ವ್ಯವಸಾಯಕ್ಕೆ ಅನುಕೂಲವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಬೇಡಿಕೆ ಮಾತ್ರ ಈಡೇರಿಲ್ಲ. ಹೀಗಾಗಿ 5ಎ ಕಾಲುವೆ ಹೋರಾಟ ಸಮಿತಿ ಹಲವು ದಿನಗಳಿಂದ ಅನಿರ್ದಿಷ್ಟ ಧರಣಿ ನಡೆಸುತ್ತಿದ್ದು, ಇದೀಗ ಹೋರಾಟವನ್ನ ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ ಇಂದು ಮಸ್ಕಿ ಪಟ್ಟಣ ಬಂದ್ಗೊಳಿಸಿ, ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಕಾಲುವೆ ನಿರ್ಮಾಣಕ್ಕೆ ಆಗ್ರಹಿಸಿದ್ರು.
ಇನ್ನು ಬಂದ್ ಹಿನ್ನೆಲೆಯಲ್ಲಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸುವ ವೇಳೆ ಸಿಂಧನೂರು - ಲಿಂಗಸುಗೂರು ಬಸ್ ಸಂಚರಿಸುತ್ತಿರುವ ವೇಳೆ ಬಸ್ ತಡೆದು ಪ್ರತಿಭಟನೆ ನಡೆಸುವಾಗ ನೂಕು-ನುಗ್ಗಲು ಉಂಟಾಯಿತು. ಸರ್ಕಾರ ಈ ಹೋರಾಟಕ್ಕೆ ಎಚ್ಚೆತ್ತು 5ಎ ಕಾಲುವೆ ನಿರ್ಮಾಣಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟವನ್ನ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.