ರಾಯಚೂರು: ಒಡಹುಟ್ಟಿದ ತಮ್ಮನೇ ಅಣ್ಣನನ್ನು ಬರ್ಬರವಾಗಿ ಹತ್ಯೆ ಮಾಡಿರುವ ದಾರುಣ ಘಟನೆ ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದಲ್ಲಿ ನಡೆದಿದೆ. ಜಿಲ್ಲೆಯ ಮಾನವಿ ಪಟ್ಟಣದ ಸೋನಿಯಾಗಾಂಧಿನಗರ ವಾರ್ಡ್ 9ರ ಮನೆಯಲ್ಲಿ ಈ ಘಟನೆ ಜರುಗಿದ್ದು, ಪರಿಷತ್ ರಾಜ್(28) ಹತ್ಯೆಯಾದವರು. ಆರೋಪಿ ಭೀಮಶಂಕರ್ ಕೊಲೆ ಮಾಡಿರುವ ತಮ್ಮ.
ಅಣ್ಣ ಪರಿಷತ್ ರಾಜ್ ದಿನ ನಿತ್ಯ ಕುಡಿದು ಬಂದು ಕಿರಿಕಿರಿ ಮಾಡುತ್ತಿದ್ದ. ಇದರಿಂದ ರೋಸಿ ಹೋದ ತಮ್ಮ ಕೊಡಲಿಯಿಂದ ಅಣ್ಣನನ್ನು ಹೊಡೆದಿದ್ದಾನೆ. ಪರಿಣಾಮ ಅಣ್ಣ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನೆ ಮನೆಯಲ್ಲಿ ನಡೆದಿದ್ದು, ಮನೆ ರಕ್ತಸಿಕ್ತವಾಗಿತ್ತು. ಇನ್ನು ಘಟನಾ ಸ್ಥಳಕ್ಕೆ ಮಾನವಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಿಷ್ ರಾಜ್ ಮನೆಯಲ್ಲಿ ನಿತ್ಯ ಕಿರಿಕಿರಿ ಮಾಡುತ್ತಿದ್ದ. ಅಲ್ಲದೇ ತಾಯಿಗೂ ಬೈಯುತ್ತಿದ್ದನಂತೆ. ಹೀಗಾಗಿ ತಮ್ಮನೇ ಅಣ್ಣನಿಗೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಬಂಧನ ಮಾಡಲಾಗಿದೆ. ತಾಯಿ ಹನುಮಂತಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ಮಾನವಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಭದ್ರಾವತಿ ಲಾಡ್ಜ್ನಲ್ಲಿ ಕೊಲೆ: ಪ್ರಿಯತಮೆಯಿಂದ ಪ್ರಿಯತಮನ ಹತ್ಯೆ ಶಂಕೆ