ರಾಯಚೂರು: ನಗರಗಳು ಮಳೆ ನೀರಿನಿಂದ ಜಲಾವೃತ್ತಗೊಂಡಿದ್ದು, ಜನ - ಜೀವನ ಅಸ್ತವ್ಯಸ್ತಗೊಂಡಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಸಲಹಾ ಸಮಿತಿ ರಚಿಸಬೇಕು ಎಂದು ನಗರಸಭೆ ಹಿರಿಯ ಸದಸ್ಯ ಜಯಣ್ಣ ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ, ನಗರಸಭೆ ಸೇರಿದಂತೆ ನಾನಾ ಇಲಾಖೆ ಸೇರಿಕೊಂಡು ತಾಂತ್ರಿಕ ಸಲಹಾ ಸಮಿತಿ ರಚಿಸಬೇಕು. ಈ ಮೂಲಕ ನಗರದಲ್ಲಿ ಬರುವ ಮಳೆಯಿಂದ ಹರಿಯುವ ನೀರು ಬಡಾವಣೆಗಳಿಗೆ ನುಗ್ಗದಂತೆ ಶಾಶ್ವತ ವ್ಯವಸ್ಥೆ ಕೈಗೊಳ್ಳಬೇಕು. ಇಲ್ಲದಿದ್ದರೆ ಬರುವಂತಹ ದಿನಗಳಲ್ಲಿ ಇಡೀ ನಗರವೇ ಜಲಾವೃತ್ತಗೊಳ್ಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಳೆಯಿಂದ ನಗರದ ಸಿಯಾತಲಾಬ್, ಜಲಾಲನಗರ, ನೀರಭಾವಿಕುಂಟಾ ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಮಳೆ ನೀರು ನುಗ್ಗಿ, ಜನ - ಜೀವನ ಅಸ್ತವ್ಯಸ್ತಗೊಳಿಸಿದೆ. ಇದಕ್ಕೆ ಆಡಳಿತ ವೈಫಲ್ಯವೇ ಕಾರಣವಾಗಿದ್ದು, ಜನರು ಸಂಕಷ್ಟ ಎದುರಿಸುವಂತೆ ಮಾಡಿದೆ ಎಂದರು. ಹೀಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಮಳೆಯ ನೀರು ನಗರದ ಬಡಾವಣೆಗಳಿಗೆ ನುಗ್ಗದಂತೆ ತಾಂತ್ರಿಕ ಸಲಹಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.