ರಾಯಚೂರು: ಕೆಲವೇ ದಿನಗಳಲ್ಲಿ ಅಧಿವೇಶನ ಆರಂಭವಾಗಲಿದೆ. ಅಧಿವೇಶನದ ಬಳಿಕ ನನಗೆ ನೀಡಿರುವ ನಿಗಮದ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಹೇಳಿದ್ದಾರೆ.
ರಾಜ್ಯ ಜೈವಿಕ ಇಂಧನ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಆದೇಶಿಸಿತ್ತು. ಆದರೆ ಇದುವರೆಗೆ ಅಧಿಕಾರವನ್ನ ಸ್ವೀಕರಿಸಿರಲಿಲ್ಲ. ಆಗ ಕೊರೊನಾ ಸೋಂಕು ತಗುಲಿರುವುದರಿಂದ ಅಧಿಕಾರ ಸ್ವೀಕರಿಸಿಲ್ಲ. ಈಗ ಅಧಿವೇಶನ ಆರಂಭವಾಗಲಿದೆ. ಹೀಗಾಗಿ ಅಧಿವೇಶನ ಬಳಿಕ ಅಧ್ಯಕ್ಷ ಸ್ಥಾನ ಸ್ವೀಕರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳುತ್ತೇನೆ.
ಬಿಜೆಪಿ ಸರ್ಕಾರ ಬರುವುದಕ್ಕೆ ಕಾರಣವಾದವರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನ ಸಿಎಂ ಯಡಿಯೂರಪ್ಪನವರು ನೀಡಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವವರು. ಬಿಎಸ್‌ವೈ ನೀಡಿದ ಭರವಸೆಯಂತೆ ಸಚಿವ ಸ್ಥಾನ ನೀಡುತ್ತಾರೆ. ರಾಯಚೂರು ಜಿಲ್ಲೆಗೆ ಸಚಿವ ಸ್ಥಾನ ಸಿಗುವುದೇ ಎಂಬ ಪ್ರಶ್ನೆಗೆ, ಮಸ್ಕಿಯ ಪ್ರತಾಪ್ ಗೌಡ ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ತೀರ್ಮಾನ ಮಾಡಲಾಗಿದೆ. ಅಲ್ಲಿಯ ಕಾನೂನು ತೊಡಕು, ಎಲೆಕ್ಷನ್ ಬಳಿಕ ಅವರಿಗೆ ಸಚಿವ ಸ್ಥಾನ ನೀಡಲಿದ್ದಾರೆ.
ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ ನಾನು ಕೇಳಿಲ್ಲ, ಅದು ಪಕ್ಷದ ತೀರ್ಮಾನಕ್ಕೆ ಬಿಟ್ಟಿದ್ದು. ಸಚಿವ ಶ್ರೀರಾಮುಲು ಈ ಭಾಗದ ಉನ್ನತ ನಾಯಕರಾಗಿದ್ದು, ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕರು ಆಗಿದ್ದಾರೆ. ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಅದಕ್ಕೆ ನಾವು ಕೊಡ ಬೆಂಬಲಿಸುತ್ತೇವೆ. ಈ ಬಗ್ಗೆ ಸರ್ಕಾರ, ಪಕ್ಷ ನಿರ್ಧಾರಿಸಲಿದೆ ಎಂದರು.