ಲಿಂಗಸುಗೂರು (ರಾಯಚೂರು): ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಮಾಡಲು ಅವಶ್ಯಕ ವಸ್ತುಗಳ ಖರೀದಿ ಹೆಸರಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಕುರಿತು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಒತ್ತಾಯಿಸಿದೆ.
ಈ ಬಗ್ಗೆ ಲಿಂಗಸುಗೂರಿಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಈ ಕುರಿತು ಕಾರ್ಯಕರ್ತರು ದೂರು ಸಲ್ಲಿಸಿದರು. ಜಿಲ್ಲಾಧಿಕಾರಿಗಳು ಕೋವಿಡ್ ಕೆಟಿಪಿಪಿ ನಿಯಮ ದುರ್ಬಳಕೆ ಮಾಡಿಕೊಂಡು, ಲಿಂಗಸುಗೂರು ಪುರಸಭೆ ರೂ. 32ಲಕ್ಷ, ಮುದಗಲ್ಲ ಪುರಸಭೆ ರೂ. 16 ಲಕ್ಷ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಕೋಟ್ಯಂತರ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ, ಪೌರಾಡಳಿತ ಯೋಜನಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಪುರಸಭೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ರಾತ್ರೋ ರಾತ್ರಿ 14ನೇ ಹಣಕಾಸು ಯೋಜನೆಯ ಉಳಿದ ಹಣಕ್ಕೆ ಕ್ರಿಯಾಯೋಜನೆ ಸಿದ್ಧಪಡಿಸಿದ್ದಾರೆ. ನಿಯಮಾನುಸಾರ ವಸ್ತುಗಳ ಖರೀದಿ ಮಾಡದೆ ಹಣ ಖರ್ಚಾಗಿದೆ. ಈ ಮೂಲಕ ಸರ್ಕಾರದ ಕಣ್ಣಿಗೆ ಮಣ್ಣೆರೆಚಿದ್ದು ತನಿಖೆ ನಂತರ ವಾಸ್ತವಾಂಶ ಹೊರಬೀಳಲಿದೆ ಎಂದರು.
ಲಕ್ಷಾಂತರ ಮೌಲ್ಯದ ವಸ್ತುಗಳ ಖರೀದಿ ಮಾಡಲು ಯಾವುದೇ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಟೆಂಡರ್ ಕರೆದಿಲ್ಲ. ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಮಾರುಕಟ್ಟೆ ಮಾಹಿತಿಯನ್ನೂ ಸಂಗ್ರಹಿಸಿಲ್ಲ. ಆರೋಗ್ಯ ಇಲಾಖೆ ದರಪಟ್ಟಿ ನಿರ್ಧರಿಸಿ ಯಾವುದೇ ವಸ್ತು ಪಡೆಯದೆ ಬಿಲ್ ಪಾವತಿ ಕುರಿತು ತನಿಖೆ ನಡೆಸದೆ ಹೋದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಸಂಸದ ರಾಜಾ ಅಮರೇಶ್ವರ ನಾಯಕರು ಈ ಕುರಿತು ಅಧಿಕಾರಿಗಳು, ಸಂಘಟಕರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕು. ಸ್ಥಳೀಯ ಸಂಸ್ಥೆ ಮುಖ್ಯಾಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದು ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.