ರಾಯಚೂರು: "ನಮ್ಮ ಪಕ್ಷದಲ್ಲಿ ಏನೂ ಮಿಸ್ ಅಂಡರ್‌ಸ್ಟ್ಯಾಂಡಿಂಗ್ ಮತ್ತು ಗೊಂದಲ ಇಲ್ಲ" ಎಂದು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ತಿಳಿಸಿದರು. ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕರು ಸಿಎಂ ಮತ್ತು ಅಧಿಕಾರ ಹಂಚಿಕೆ ವಿಚಾರವಾಗಿ ಹೇಳಿಕೆ ನೀಡಿದ್ದ ಬಗ್ಗೆ ಮಾತನಾಡಿದ ಅವರು, "ನಿನ್ನೆ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಬ್ಬರೂ ಕುಳಿತು ಮಾತನಾಡಿದ್ದಾರೆ. ನಾವು ಅವರೊಂದಿಗೆ ಇದ್ದೆವು. ರಾಜಕೀಯದಲ್ಲಿ ಗೊಂದಲ ಸೃಷ್ಟಿಯಾಗುವುದು ಸಹಜ" ಎಂದರು.
"ರಾಜ್ಯದಲ್ಲಿ ಬಿಜೆಪಿಯವರು ಪೂರ್ತಿ ವಿಫಲರಾಗಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ನ ಗ್ಯಾರಂಟಿಗಳ ರೀತಿಯ ಯೋಜನೆಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರ ನಾಯಕತ್ವದ ಮುಂದೆ ಬಿಜೆಪಿಯವರು ಎಷ್ಟು ವೀಕ್ ಆಗಿದ್ದಾರೆ ಎಂಬುದು ಈಗ ಗೊತ್ತಾಗುತ್ತಿದೆ. ಬಿಜೆಪಿ ನಾಯಕರಿಗೆ ಈಗ ಗೊಂದಲವಾಗಿದೆ. ಜೆಡಿಎಸ್ ನಾಯಕರ ಕತೆ ಅಂತೂ ಗೊತ್ತೇ ಇದೆ. ಈಗ ಯಾರು ಹೋಗುತ್ತಾರೋ, ಯಾರು ಇರುತ್ತಾರೋ ಎಂಬ ಲೆಕ್ಕಾಚಾರದಲ್ಲಿದ್ದಾರೆ. ದಿನ ಏನಾದರೂ ಒಂದು ಮಾತನಾಡಿ ಜನರಲ್ಲಿ ಗೊಂದಲ ಸೃಷ್ಟಿಸಲು ನೋಡುತ್ತಿದ್ದಾರೆ" ಎಂದು ತಿರುಗೇಟು ನೀಡಿದರು.
"ಪರಮೇಶ್ವರ್ ಸಿಎಂ ಆಗಲಿ ಎಂಬ ಸಚಿವ ರಾಜಣ್ಣ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಚಿವ ರಾಜಣ್ಣ ಅವರು ಸಹ ನಿನ್ನೆಯ ಸಭೆಯಲ್ಲಿ ಇದ್ದರು. ಸಿಎಂ ಮಾಡಬೇಕು ಅಂತ ಬಂದಾಗ ಇವರನ್ನು ಮಾಡಬೇಕು ಅಂತ ಅವರು ಹೇಳಿದ್ದಾರೆ" ಎಂದರು. "ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ನಿರ್ಧಾರ ಮಾಡುವುದಕ್ಕೆ ಹೈಕಮಾಂಡ್ ಇದೆ. ಆ ಸಂಸ್ಕೃತಿ ಹಿಂದಿನಿಂದ ಬಂದಿದೆ. ಈಗಲೂ ಇದೆ, ಮುಂದೆಯೂ ಮುಂದುವರೆಯುತ್ತೆ. ಯಾರನ್ನೇ ಎಂಎಲ್ಎ, ಎಂಎಲ್ಸಿ ಮಾಡಬೇಕು ಎಂಬುದರ ಕುರಿತು ಹೈಕಮಾಂಡ್ ಸ್ಥಳೀಯ ನಾಯಕರು, ಮುಖ್ಯಮಂತ್ರಿಗಳು ಮತ್ತು ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.
"ಕಾಂಗ್ರೆಸ್ನಲ್ಲಿರುವುದು ಒಂದೇ ಬಣ ಅದುವೆ ಕಾಂಗ್ರೆಸ್ ಬಣ. ಪಾರ್ಟಿಯಲ್ಲಿ ಎಲ್ಲರೂ ಶಿಸ್ತಿನಿಂದ ಇದ್ದಾರೆ. ಜನರು ನಮಗೆ ಆಶೀರ್ವಾದ ಮಾಡಿದ್ದಾರೆ. ಜನರ ಆಪೇಕ್ಷ ಈಡೇರಿಸಲು ನಾವು ಗ್ಯಾರೆಂಟಿ ತಂದಿದ್ದೇವೆ. ಇಡೀ ದೇಶವೇ ಈಗ ಕರ್ನಾಟಕ ಮಾಡೆಲ್ ಅನುಸರಿಸುತ್ತಿದೆ. ಈಗ ಗುಜರಾತ್ ಮಾಡೆಲ್ ಹೋಗಿಬಿಟ್ಟಿದೆ. ಈಗ ಕರ್ನಾಟಕ ಮಾಡೆಲ್ ಇಡೀ ರಾಷ್ಟ್ರಕ್ಕೆ ಆಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಾಯಕತ್ವದಲ್ಲಿ ಸರ್ಕಾರ ಬಹಳ ಭದ್ರವಾಗಿದೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಂಗಾಲಾಗಿದ್ದಾರೆ. ಕೆಲವರನ್ನ ಸೇರಿಸಿಕೊಂಡು ತಪ್ಪು ಮೆಸೇಜ್ ಕೊಟ್ಟು. ತಪ್ಪು ದಾರಿ ಹಿಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಜೆಡಿಎಸ್- ಬಿಜೆಪಿಯವರು ಸಫಲರಾಗುವುದಿಲ್ಲ ಎಂದು ಸಚಿವ ಬೋಸರಾಜು ಹೇಳಿದ್ರು.
ಇದನ್ನೂ ಓದಿ: ಡಿ ಕೆ ಶಿವಕುಮಾರ್ ಸಿಎಂ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ: ಮದ್ದೂರು ಶಾಸಕ ಕದಲೂರು ಉದಯ್