ಲಿಂಗಸುಗೂರು : ಮಹಾರಾಷ್ಟ್ರದ ಪೂನಾ ನಗರದಿಂದ ಆಗಮಿಸಿರುವ ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಮೆದಕಿನಾಳ ತಾಂಡಾದ 48 ಕೂಲಿ ಕಾರ್ಮಿಕರು ಮಸ್ಕಿಯ ಮೊರಾರ್ಜಿ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್ಗೆ ಹೋಗಲು ವಿರೋಧ ವ್ಯಕ್ತಪಡಿಸಿದ ಘಟನೆ ಜರುಗಿತು.
ಮಂಗಳವಾರ ಪೂನಾದಿಂದ ಆಗಮಿಸಿದ ಕೂಲಿ ಕಾರ್ಮಿಕರು ಅಲ್ಲಿಯೂ ನಮಗೆ ವೈದ್ಯಕೀಯ ಪರೀಕ್ಷೆ ಮಾಡಿದ್ದಾರೆ. ಇಲ್ಲಿಯು ವೈದ್ಯಕೀಯ ಪರೀಕ್ಷೆ ನಡೆಸಿ, ಹೋಮ್ ಕ್ವಾರಂಟೈನ್ನಲ್ಲಿರುತ್ತೇವೆ. ಆದರೆ, ಮನೆಬಿಟ್ಟು ದುಡಿಯಲು ಹೋಗಿ ಸಂಬಂಧಿಕರು ದೂರ ಆಗಿದ್ದಾರೆ. ಈಗ ಮತ್ತೆ ಬೇರೆ ಊರಲ್ಲಿ ಇರಲ್ಲ ಎಂದು ವಾಗ್ವಾದ ನಡೆಸಿದರು.
ಮಸ್ಕಿ ಪಿಎಸ್ಐ ಸಣ್ಣ ವೀರೇಶ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ಹೊರ ರಾಜ್ಯದಿಂದ ಬಂದವರನ್ನು ಹೋಮ್ ಕ್ವಾರಂಟೈನ್‌ನಲ್ಲಿರಿಸಲು ಅವಕಾಶವಿಲ್ಲ. ಇದ್ದರೆ ಮೊರಾರ್ಜಿ ವಸತಿ ಶಾಲೆಯಲ್ಲಿರಬೇಕು. ಇಲ್ಲ ಅಂದ್ರೆ ಜೈಲಿಗೆ ಕಳುಹಿಸಲಾಗುತ್ತೆ ಎಂದು ಎಚ್ಚರಿಸಿ ಮನವೊಲಿಸುವಲ್ಲಿ ಯಶಸ್ವಿಯಾದರು.
ಹೀಗಾಗಿ ಇಂದು 48 ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಯ್ತು. ಮಸ್ಕಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ಹೊರ ರಾಜ್ಯದಿಂದ ಬಂದವರ ಸಂಖ್ಯೆ 135ಕ್ಕೆ ಏರಿಕೆ ಆಗಿದೆ ಎಂದು ಕ್ವಾರಂಟೈನ್ ಕೇಂದ್ರದ ಮೂಲಗಳು ದೃಢಪಡಿಸಿವೆ.