ರಾಯಚೂರು: ಆದರ್ಶ ವಿದ್ಯಾಲಯದ ಶಿಕ್ಷಕಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಮಸ್ಕಿ ರಸ್ತೆಯಲ್ಲಿನ ಜ್ಞಾನಗಂಗಾ ಶಾಲೆ ಬಳಿಯ ಮನೆಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ ಹೊಳಲ್ಕೆರೆ ಮೂಲದ ಜಗದಾಂಬಿಕ(55) ಮೃತ ಶಿಕ್ಷಕಿಯೆಂದು ಗುರುತಿಸಲಾಗಿದೆ.
ಲಿಂಗಸೂಗೂರಿನ ಆದರ್ಶ ವಿದ್ಯಾಲಯದಲ್ಲಿ ಎರವಲು ಸೇವೆಯಲ್ಲಿ ಶಿಕ್ಷಕಿಯಾಗಿ ಜಗದಾಂಗ ಕರ್ತವ್ಯ ನಿವರ್ಹಿಸುತ್ತಿದ್ದರು. 2001ರಲ್ಲಿ ಮಸ್ಕಿ ತಾಲೂಕಿನ ಉಸ್ಕಿಹಾಳದ ಸೇವೆಗೆ ಸೇರ್ಪಡೆಗೊಂಡು, ಬಳಿಕ 2002ರಲ್ಲಿ ಸ್ಥಳೀಯ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ 2019ರ ಅಂಕ್ಟೋಬರ್ನಲ್ಲಿ ಕಡ್ಡಾಯ ವರ್ಗಾವಣೆಯಲ್ಲಿ ಲಿಂಗಸೂಗೂರು ತಾಲೂಕಿನ ಚಿಕ್ಕಹೆಸರೂರು ಸರಕಾರಿ ಶಾಲೆಗೆ ನಿಯೋಜನೆಗೊಂಡಿದ್ದರು.
ಕೆಲ ದಿನಗಳ ನಂತರ ಲಿಂಗಸೂಗೂರಿನಲ್ಲಿ ಆದರ್ಶ ವಿದ್ಯಾಲಯದಲ್ಲಿ ಎರವಲು ಸೇವೆ ಮೇಲೆ ನಿಯೋಜನೆಗೊಂಡು ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಮನೆಯಲ್ಲಿ ಒಂಟಿಯಾಗಿರುವುದು, ವರ್ಗಾವಣೆ ಸಿಗುತ್ತಿಲ್ಲ ಹಾಗೂ ಮಗಳ ಸಾವಿನಿಂದ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತು ಲಿಂಗಸೂಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.