ರಾಯಚೂರು : ಪ್ರತಾಪಗೌಡ ಪಾಟೀಲರ ಕುಟುಂಬದ ಸದಸ್ಯರು ಗುಂಡಾಗಿರಿಯಲ್ಲಿ ತೊಡಗಿದ್ದು, ಉಪ ಚುನಾವಣೆ ನಂತರ ವಿರೋಧಿಗಳ ಮೇಲೆ ಹಲ್ಲೆ ಮಾಡುತ್ತಿರುವುದು ಬಹಿರಂಗಗೊಂಡಿದೆ. ಕೂಡಲೇ ಗುಂಡಾ ವರ್ತನೆ ನಿಲ್ಲಿಸಬೇಕು ಎಂದು ನೂತನ ಮಸ್ಕಿ ಶಾಸಕ ಬಸವನಗೌಡ ತುರುವಿಹಾಳ ಒತ್ತಾಯಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೌಮ್ಯ ಸಭಾವದ ಶಾಸಕರು ಎಂದು ಕರೆಸಿಕೊಳ್ಳುತ್ತಿದ್ದ ಪ್ರತಾಪಗೌಡ ಪಾಟೀಲರು ಉಪ ಚುನಾವಣೆ ಫಲಿತಾಂಶ ನಂತರ ಅವರನ್ನು ಬೆಂಬಲಿಸದವರನ್ನು ಗುರಿಯಾಗಿಸಿಕೊಂಡು ಕುಟುಂಬ ಸದಸ್ಯರೊಂದಿಗೆ ಗುಂಡಾಗಿರಿ ಮಾಡುತ್ತಿದ್ದಾರೆ.
ಬಹಿರಂಗವಾಗಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುತ್ತಿದ್ದು, 12 ವರ್ಷಗಳ ಕಾಲ ಶಾಸಕರಾಗಿದ್ದವರಿಗೆ ಶೋಭೆ ತರುವುದಿಲ್ಲ. ಚುನಾವಣೆಯ ಫಲಿತಾಂಶ ಸಮಾನವಾಗಿ ಸ್ವೀಕರಿಸಬೇಕು.
ಕೂಡಲೇ ಕುಟುಂಬದ ಸದಸ್ಯರು ಗುಂಡಾ ವರ್ತನೆ ನಿಲ್ಲಿಸಬೇಕು. ಇದು ಮುಂದುವರಿದಲ್ಲಿ, ಕಾಂಗ್ರೆಸ್ ಪಕ್ಷದಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಹಿರಿಯ ಮುಖಂಡರು ಚುನಾವಣೆ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆ ಈಡೇರಿಸಲು ಬದ್ಧವಾಗಿದ್ದು, 5ಎ ಕಾಲುವೆ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಮೇಲೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ರಾಜ್ಯದ್ಯಕ್ಷ ಡಿ.ಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿ ಸದನದಲ್ಲಿ ಒತ್ತಾಯ ಮಾಡಲಾಗುವುದು.
ಒಂದು ವೇಳೆ ಈ ಅವಧಿಯಲ್ಲಿ ಯೋಜನೆ ಜಾರಿಯಾಗದಿದ್ದರೆ ಮುಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ರು.
ಏತ ನೀರಾವರಿ ಯೋಜನೆ ನಮ್ಮ ಭಾಗದಲ್ಲಿ ಎಲ್ಲಿಯೂ ಯಶಸ್ವಿಯಾಗಿಲ್ಲ, ರಾಜ್ಯ ಸರ್ಕಾರ ನಮ್ಮ ಕ್ಷೇತ್ರದಲ್ಲಿ ಜಾರಿಗೊಳಿಸಲು ಹೊರಟಿರುವ ವಡಗಲ್ ಏತ ನೀರಾವರಿ ಯೋಜನೆ ಡಿಪಿಆರ್ ಹಂತದಲ್ಲಿ ಇದ್ದು, ಇದನ್ನು ಅಲ್ಲಿಯೇ ಸ್ಥಗಿತಗೊಳಿಸಲು ಒತ್ತಾಯಿಸಲಾಗುವುದು.
ಜನರು ಬದಲಾವಣೆ ಬಯಸಿ ನಮ್ಮನ್ನು ಶಾಸಕರಾಗಿ ಆಯ್ಕೆ ಮಾಡಿದ್ದು, ಅವರು ಅಭಿಲಾಷೆ ತಕ್ಕಂತೆ ಕಾರ್ಯ ನಿರ್ವಹಿಸುವೆ,ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳ ಪರಹಾರದ ಜೊತೆಯಲ್ಲಿ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಅಭಿವೃದ್ಧಿ ಪಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಬಸವನಗೌಡ ತುರುವಿಹಾಳ ಹೇಳಿದರು.