ರಾಯಚೂರು: ಮಸ್ಕಿ ಬೈ ಎಲೆಕ್ಷನ್ ವೇಳೆ ಕೊರೊನಾ ಸೋಂಕಿತರು ಸೇರಿದಂತೆ ಹಿರಿಯ ನಾಗರಿಕರು, ವಿಶೇಷಚೇತನರಿಗಾಗಿ ಅಂಚೆ ಮತದಾನದ ಅವಕಾಶ ಕಲ್ಪಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಜಲ ನಿರ್ಮಲ ಸಭಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಮಸ್ಕಿ ಉಪಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯವನ್ನು ಸ್ಟೀಪ್ ಸಮಿತಿ ಮಾಡುತ್ತಿದೆ. ಕೊರೊನಾ ಮುಂಜಾಗೃತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ, ಮತಗಟ್ಟೆಯೊಳಗೆ ಮತದಾನಕ್ಕೆ ಮೂರು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು. ಪಾಸಿಟಿವ್ ಬಂದವರು, ಹಿರಿಯ ನಾಗರಿಕರು, ಅಂಗವಿಕಲರಿಗೆ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಕಳೆದ ಬಾರಿ ಶೇ.10ಕ್ಕಿಂತ ಕಡಿಮೆ ಮತದಾನ ಆಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚಿನ ಚುನಾವಣೆ ಜಾಗೃತಿ ಕಾರ್ಯ ನಡೆಸಲಾಗುವುದು, ಇವಿಎಂ ಮತ್ತು ವಿವಿ ಪ್ಯಾಟ್ಗಳ ಕುರಿತು ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುವುದು.
ಮತದಾರರು ಗುರುತಿನ ಚೀಟಿ ಇಲ್ಲದೆ ಇದ್ದರೂ ಮತದಾನದ ಪಟ್ಟಿಯಲ್ಲಿ ಹೆಸರಿದ್ದರೆ ಇತರೆ ಗುರುತಿನ ಚೀಟಿ ತೊರಿಸಿದಲ್ಲಿ ಮತದಾನಕ್ಕೆ ಅವಕಾಶವಿದೆ. ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮತದಾನ ಹಕ್ಕಿದೆ. ಹಾಗಾಗಿ ಎಲ್ಲರೂ ಯಾವುದೇ ರೀತಿಯ ಆಮಿಷಕ್ಕೆ ಒಳಗಾಗದೆ ಮತದಾನ ಮಾಡಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬೆಳಗಾಗುವುದರೊಳಗೆ ಕೋಟ್ಯಾಧಿಪತಿಯಾದ ಅಜ್ಜಿ: ಗುಜರಿ ನಡೆಸುತ್ತಿದ್ದವರ ಮನೆ ತುಂಬಾ ಈಗ ಹಣದ ಹೊಳೆ!