ರಾಯಚೂರು: ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರವಾದ ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಮತದಾನ ಶನಿವಾರ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ.
ಮಸ್ಕಿ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಕಾಲೇಜಿನಲ್ಲಿ ಮತದಾನಕ್ಕೆ ಅಂತಿಮ ಸಿದ್ದತೆ ಮಾಡಿಕೊಳ್ಳಲಾಗಿದೆ. ಕ್ಷೇತ್ರದಲ್ಲಿ ಒಟ್ಟು 305 ಕೇಂದ್ರಗಳನ್ನ ಸ್ಥಾಪಿಸಲಾಗಿದ್ದು, ಕೋವಿಡ್ ಹಿನ್ನೆಲೆ 74 ಹೆಚ್ಚುವರಿ ಮತಗಟ್ಟೆ ತೆರೆಯಲಾಗಿದೆ. 62 ಸೂಕ್ಷ್ಮ, 7 ಅತಿ ಸೂಕ್ಷ್ಮ, 2 ಸಖಿ ಮತಗಟ್ಟೆ ತೆರಯಲಾಗಿದೆ. 153 ವೆಬ್ ಕಾಸ್ಟಿಂಗ್ ಮತಗಟ್ಟೆಗಳಲ್ಲಿ ಸಿದ್ದತೆ ಮಾಡಿಕೊಳ್ಳಲಾಗಿದೆ. ಮತದಾನ ಪ್ರಕ್ರಿಯೆಗೆ ಒಟ್ಟು 2309 ಸಿಬ್ಬಂದಿ ನಿಯೋಜಿಸಲಾಗಿದೆ.
ಹೀಗಿದೆ ಭದ್ರತೆ
ಒಟ್ಟು 2,06,429 ಮತದಾರರಿದ್ದು, 1,01,340 ಪುರುಷ, 1,05,076 ಮಹಿಳಾ ಹಾಗೂ 13 ಇತರ ಮತದಾರರಿದ್ದಾರೆ. ಭದ್ರತೆಗಾಗಿ ಒಟ್ಟು 739 ಪೊಲೀಸರು ,71 ಎಎಸ್ಐ, 25 ಪಿಎಸ್ಐ, 7 ಸಿಪಿಐಗಳು, 3 ಡಿವೈಎಸ್ಪಿ ಸೇರಿ ಒಟ್ಟು 847 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಮೂರು ಸಿಆರ್ಪಿಎಫ್,ಹೆಚ್ಚುವರಿಯಾಗಿ ಕೇಂದ್ರ ಮೀಸಲು ಪಡೆ, ಕೆಎಸ್ಆರ್ಪಿ ತಂಡಗಳನ್ನು ನಿಯೋಜಿಸಲಾಗಿದೆ. ಒಟ್ಟು 20 ಸೆಕ್ಟರ್ಗಳಲ್ಲಿ ಬಿಗಿ ಭದ್ರತೆಗೆ ನಿಯುಕ್ತಿಗೊಳಿಸಲಾಗಿದ್ದು, ಕೊರೊನಾ ಸೋಂಕಿತರಿಗಾಗಿ ಮತಗಟ್ಟೆಗಳಲ್ಲಿ ಸಂಜೆ 6 ರಿಂದ 7 ರವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
8 ಅಭ್ಯರ್ಥಿಗಳು ಕಣದಲ್ಲಿ
ಉಪಚುನಾವಣೆ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ್ ಹಾಗೂ ಕಾಂಗ್ರೆಸ್ನಿಂದ ಆರ್.ಬಸನಗೌಡ ತುರುವಿಹಾಳ, ಕರ್ನಾಟಕ ರಾಷ್ಟ್ರೀಯ ಸಮಿತಿಯ ಓಬಳೇಶ್ವರ, ಐದು ಜನ ಪಕ್ಷೇತರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.