ರಾಯಚೂರು: ಉಡುಪಿ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರ ನಿಧನಕ್ಕೆ ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಸಂತಾಪ ಸೂಚಿಸಿದ್ದಾರೆ.
ಮಂತ್ರಾಲಯದ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಗಳ ಅಗಲಿಕೆಯಿಂದ ಮನಸ್ಸಿಗೆ ನೋವುಂಟಾಗಿದೆ. ಪೇಜಾವರ ಶ್ರೀಗಳು, ದೇಶದೆಲ್ಲೆಡೆ ಸನಾತನ ಹಿಂದೂ ಧರ್ಮ ಹಾಗೂ ಮಧ್ವಾಚಾರ್ಯ ತತ್ವದ ಜ್ಞಾನವನ್ನು ಜನಸಾಮಾನ್ಯರಿಗೆ ಮನದಟ್ಟು ಮಾಡಿಸಿದವರು. ಕಳೆದ 8 ದಶಕಗಳಿಗಿಂತ ಅಧಿಕ ಕಾಲ ಸನ್ಯಾಸ ಜೀವನ ನಡೆಸುವ ಮೂಲಕ ವಯೋ ವೃದ್ಧರಾದವರು ಎಂದು ಸ್ಮರಿಸಿದ್ರು.
ಪೇಜಾವರ ಶ್ರೀಗಳು ಅನೇಕ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ, ದೀನ ದಲಿತರ ಏಳಿಗೆಗೆ ಶ್ರಮಿಸಿದ್ದರು. ವಿಶೇಷವಾಗಿ ಶ್ರೀರಾಘವೇಂದ್ರ ಮಠದ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದರು. ಮಾತ್ರವಲ್ಲದೆ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಉತ್ತಮ ಬಾಂಧವ್ಯ ಹೊಂದಿದ್ದರು ಎಂದರು.