ರಾಯಚೂರು : ಹಳೇ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆಮಾಡಿ ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ರಬಣಕಲ್ ಗ್ರಾಮದ ಪ್ರಸಾದ್ (38) ಎಂದು ಗುರುತಿಸಲಾಗಿದೆ. ಬೆಳಗ್ಗೆ ಭತ್ತದ ಗದ್ದೆಗೆ ನೀರು ಕಟ್ಟಲು ತೆರಳಿದಾಗ ಏಕಾಏಕಿ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ ಮೂವರು ದುಷ್ಕರ್ಮಿಗಳು ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ ಪ್ರಸಾದ್ ಅವರು ಜಮೀನಿಗೆ ನೀರು ಕಟ್ಟಲೆಂದು ಬೈಕ್ನಲ್ಲಿ ತೆರಳಿದ್ದರು. ಈ ವೇಳೆ ಜಮೀನಿನ ಬಳಿ ಕಾದು ಕುಳಿತಿದ್ದ ಮೂವರು ದುಷ್ಕರ್ಮಿಗಳು ಏಕಾಏಕಿ ಪ್ರಸಾದ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ದಾಳಿ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ರಬಣಕಲ್ ಗ್ರಾಮದ ಮೂವರು ಹತ್ಯೆಗೈದಿರುವುದಾಗಿ ಆರೋಪಿಸಲಾಗಿದೆ.
ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹತ್ಯೆಯನ್ನು ಖಂಡಿಸಿ ದಲಿತ ಸಂಘಟನೆಗಳು ಮಾನ್ವಿ ತಾಲೂಕಿನ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದವು.
ಇದನ್ನೂ ಓದಿ : ಜಮೀನು ವಿವಾದದ ಕಿತ್ತಾಟದಲ್ಲಿ 6 ಬಾರಿ ಟ್ರ್ಯಾಕ್ಟರ್ ಹತ್ತಿಸಿ ಯುವಕನ ಬರ್ಬರ ಹತ್ಯೆ!
ಕೋಲಾರದಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ : ಕಳೆದ ಅಕ್ಟೋಬರ್ 23ರಂದು ದಲಿತ ಮತ್ತು ಕಾಂಗ್ರೆಸ್ನ ಸ್ಥಳೀಯ ಪ್ರಭಾವಿ ಮುಖಂಡರೊಬ್ಬರನ್ನು ಅಪರಿಚಿತರ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿತ್ತು. ಇಲ್ಲಿನ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ದುಷ್ಕರ್ಮಿಗಳು ಮುಖಂಡನನ್ನು ಮರ್ಡರ್ ಮಾಡಿ ಪರಾರಿಯಾಗಿದ್ದರು. ಮೃತರನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿತ್ತು. ಕೇವಲ ಮೂರು ದಿನಗಳ ಅಂತರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಹತ್ಯೆ ನಡೆದಿತ್ತು. ಇದಕ್ಕೂ ಮುನ್ನ ಮಾಲೂರು ತಾಲೂಕು ಜಯಮಂಗಲ ಗ್ರಾಮ ಪಂಚಾಯ್ತಿ ಸದಸ್ಯ ಅನಿಲ್ ಅವರನ್ನು ಹತ್ಯೆ ಮಾಡಲಾಗಿತ್ತು.
ಶ್ರೀನಿವಾಸನ್ ಅಲಿಯಾಸ್ ಕೌನ್ಸಿಲರ್ ಶ್ರೀನಿವಾಸ್ ಅವರು ಶ್ರೀನಿವಾಸಪುರದಲ್ಲಿ ಪ್ರಭಾವಿ ದಲಿತ ಮುಖಂಡರಾಗಿದ್ದರು. ಕಳೆದ ನಲವತ್ತು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದು, ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಪುರಸಭೆ ಸದಸ್ಯರಾಗಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿ ಮತ್ತು ಶ್ರೀನಿವಾಸಪುರ ಎಪಿಎಂಸಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. 2018ರವರೆಗೆ ಜೆಡಿಎಸ್ ಪಕ್ಷದಲ್ಲಿದ್ದು, ನಂತರ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.