ರಾಯಚೂರು: ಕೋವಿಡ್ನಿಂದ ಆರ್ಥಿಕ ಹೊರೆಗೆ ಸಿಲುಕಿರುವ ಮಧ್ಯಮ ವರ್ಗದ ಕುಟುಂಬಗಳು ಚೇತರಿಸಿಕೊಳ್ಳಲು ಹೆಣಗಾಡುತ್ತಿವೆ. ಅದರಲ್ಲೂ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ.
ಈ ಮೊದಲು ಬರುವ ಆದಾಯ ನೋಡಿಕೊಂಡು ಮಧ್ಯಮ ವರ್ಗದ ಮಹಿಳೆಯರು ಖರ್ಚು ವೆಚ್ಚಗಳ ಬಗ್ಗೆ ತಮ್ಮದೇ ಆದ ಲೆಕ್ಕಾಚಾರ ನೋಡಿಕೊಂಡು ಸರಿದೂಗಿಸುವ ಕೆಲಸ ಮಾಡುತ್ತಿದ್ದರು. ಆದರೆ, ಮಹಾಮಾರಿಯಿಂದ ಬಹುತೇಕ ಖಾಸಗಿ ಸಂಸ್ಥೆಗಳಲ್ಲಿ ವೇತನ ಕಡಿತ ಮಾಡಲಾಗಿದೆ. ಲೆಕ್ಕಾಚಾರದಲ್ಲಿ ಏರುಪೇರಾಗಿ ಸಮಸ್ಯೆ ಎದುರಿಸುವಂತಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಂತೂ ಎಲ್ಲ ಸಾಮಗ್ರಿ ದರಗಳು ದುಪ್ಪಟ್ಟಾಗಿತ್ತು. ಈಗಲೂ ಕೆಲ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಇದೆ. ಜತೆಗೆ ಮಾಸ್ಕ್, ಸ್ಯಾನಿಟೈಸರ್ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮಗ್ರಿಗಳಿಗಾಗಿ ತಿಂಗಳಿಗೆ ಸಾವಿರ ರೂಪಾಯಿ ಹೆಚ್ಚುವರಿ ವೆಚ್ಚ ಬರುತ್ತಿದೆ. ಹೀಗಾಗಿ, ಈಗಲೂ ಮಧ್ಯಮ ವರ್ಗದ ಕುಟುಂಬಗಳು ಮೇಲೇಳಲು ಒದ್ದಾಡುತ್ತಿವೆ.