ಲಿಂಗಸುಗೂರು (ರಾಯಚೂರು): ಶತಮಾನಗಳಷ್ಟು ಹಿಂದೆ ಮನುಕುಲಕ್ಕೆ ಕಿರುಕುಳ ನೀಡುತ್ತಿದ್ದ ಕಾರಕಾಕ್ಷ ರಾಕ್ಷಸ ಕುಲವನ್ನು ಸಂಹರಿಸಿದ ದ್ಯೋತಕವಾಗಿ ಕಾರ ಹುಣ್ಣಿಮೆಯನ್ನು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಆಚರಿಸುವುದು ವಾಡಿಕೆ.
ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಮುಂಗಾರು ಬಿತ್ತನೆ ಸಂದರ್ಭದಲ್ಲಿ ಹುಣ್ಣಿಮೆ ಹಿಂದಿನ ದಿನ (ಹೊನ್ನುಗ್ಗಿ ದಿನ) ಎತ್ತು, ಹೋರಿ ಕರುಗಳ ಕೊಂಬು ಕೆತ್ತುವ ರೈತರು ಎಣ್ಣೆ, ಅರಿಶಿಣ ಲೇಪನ ಮಾಡುತ್ತಾರೆ. ಜೊತೆಗೆ ಕೊಂಬು ಮತ್ತು ಮೈಗೆ ಕೆಂಪು ಬಣ್ಣ ಹಚ್ಚಿ ಸಿಂಗಾರ ಮಾಡುತ್ತಾರೆ.
ಆಚರಣೆಯ ಹಿನ್ನೆಲೆ:
ಈ ಕುರಿತು ಗ್ರಾಮದ ಅಮರಯ್ಯ ಕೋಠ ಅವರನ್ನು ಸಂಪರ್ಕಿಸಿದಾಗ, ಸಾಂಪ್ರದಾಯಿಕವಾಗಿ ಆಚರಿಸುವ ಕಾರ ಹುಣ್ಣಿಮೆ ದಿನ ಕಾರಕಾಕ್ಷ ಎಂಬ ರಾಕ್ಷಸ ಸಂಹಾರ ನಡೆದಿತ್ತು. ಈ ಹುಣ್ಣಿಮೆ ದಿನ ಎತ್ತುಗಳ ಕೊಂಬು ಕೆತ್ತಿ ಎಣ್ಣೆ, ಅರಿಶಿಣ ಹಚ್ಚಿ ಸಂಹಾರಕ್ಕೆ ಕಳುಹಿಸಿದ ದಿನ. ಹೀಗಾಗಿ ರೈತರು ಎರಡು ದಿನಗಳಲ್ಲಿ ಈ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹುಣ್ಣಿಮೆ ಹಿನ್ನೆಲೆ ಬಗ್ಗೆ ಮಾಹಿತಿ ನೀಡಿದರು.