ರಾಯಚೂರು: ದೇವದುರ್ಗ ಶಾಸಕ ಕೆ. ಶಿವನಗೌಡ ನಾಯಕ ತಮಗೆ ನೀಡಿರುವ ನಿಗಮ ಮಂಡಳಿ ಅಧ್ಯಕ್ಷ ಸ್ಥಾನವನ್ನು ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಸ್ಥಾನಕ್ಕೆ ನೇಮಿಸಿ ಆದೇಶ ಹೊರಡಿಸಿದ್ದರು.
ರಾಜ್ಯ ಸರ್ಕಾರ ಅನಿರೀಕ್ಷಿತವಾಗಿ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನನ್ನನ್ನು ನೇಮಿಸಿದೆ. ನಾನು ಜಿಲ್ಲೆಯ ಅಭಿವೃದ್ಧಿಗಾಗಿ ಅನುದಾನಗಳನ್ನು ಕೇಳಿದ್ದೆ. ಅಧಿಕಾರ ನಾನು ಕೇಳಿರಲಿಲ್ಲ ಎಂದು ಈ ಕುರಿತು ಹೊರಡಿಸಿರುವ ಪ್ರತಿಕಾ ಪ್ರಕಟಣೆಯಲ್ಲಿ ಶಾಸಕರು ಹೇಳಿದ್ದಾರೆ.
ತಿಂಥಣಿ ಸೇತುವೆ ಕಾಮಗಾರಿ ಪ್ರಾರಂಭ, ದೇವದುರ್ಗದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ, ರಾಯಚೂರಿನಲ್ಲಿ ವಿಮಾನ ನಿಲ್ದಾಣ ಮತ್ತು ಏಮ್ಸ್ ಸ್ಥಾಪನೆಗೆ ಕ್ರಮ, ಅರಕೇರಾ ಏತ ನೀರಾವರಿ ಯೋಜನೆ ಅಭಿವೃದ್ಧಿ, ಮಾನ್ವಿ, ರಾಯಚೂರು, ಸಿಂಧನೂರಿನಲ್ಲಿ ಕೃಷಿಕರಿಗಾಗಿ ನವಲಿ ಜಲಾಶಯ ಗುದ್ದಲಿಪೂಜೆ ಸೇರಿ ವಿವಿಧ ಅಭಿವೃದ್ಧಿ ವಿಚಾರಗಳ ಬಗ್ಗೆ ಮನವಿ ಮಾಡಿದ್ದೆ ಎಂದು ತಿಳಿಸಿದ್ದಾರೆ.
ನನ್ನ ಬಗ್ಗೆ ಪ್ರೀತಿ ವಿಶ್ವಾಸವನ್ನಿಟ್ಟು ನಿಗಮ ಮಂಡಳಿಯಲ್ಲಿ ಸ್ಥಾನಮಾನ ಕೊಟ್ಟಿದ್ದಕ್ಕೆ ಪಕ್ಷದ ಹಿರಿಯರಿಗೆ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಚಿರಋಣಿ. ದಯವಿಟ್ಟು ನನಗೆ ಕೊಟ್ಟ ಸ್ಥಾನವನ್ನು ಮತ್ತೊಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಕೊಡಿ. ಶಾಸಕನಾಗಿ ಈ ಸರ್ಕಾರದಲ್ಲಿ ಕೆಲಸ ಮಾಡುವುದರಲ್ಲಿ ನನಗೆ ತೃಪ್ತಿ ಇದೆ. ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಟ್ಟರೆ ಸಾಕು. ಅದೇ ನನಗೆ ಅಧಿಕಾರ ಕೊಟ್ಟ ಹಾಗೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಕ್ಷೇತ್ರ ಅಭಿವೃದ್ಧಿಯೇ ನನಗೆ ಮುಖ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.