ರಾಯಚೂರು: ಜಿಲ್ಲಾಡಳಿತ, ನಗರಸಭೆ, ಗ್ರೀನ್ ರಾಯಚೂರು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಮಾವಿನಕೆರೆಯ ಉದ್ಯಾನವನದಲ್ಲಿ ಸ್ವಚ್ಚತೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ ಬಿ ವೇದಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ಲಾಸ್ಟಿಕ್ ಬ್ಯಾನ್ ಆದ್ರೂ ಸಭೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಅದ್ರ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಬಳಕೆ ನಿಲ್ಲುತ್ತಿಲ್ಲ.
ಪರಿಸರ ಸ್ನೇಹಿ ಪ್ಲೇಟ್,ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ಪ್ರದರ್ಶಿಸಿ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದ ವಸ್ತು(Non-biodegradable)ವಾಗಿದ್ದು ಪರಿಸರಕ್ಕೆ ಹಾನಿಕರಕ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯ್ತು. ಬಿಸಿಲೂರು ರಾಯಚೂರನ್ನು ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವ ಇನ್ನಿಲ್ಲದಂತೆ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಹಸಿರು ವಾತಾವರಣ ನಿರ್ಮಾಣದ ಜವಾಬ್ದಾರಿ ಇಲ್ಲದಂತಾಗಿದೆ.
ಈ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಸಸಿ ನೆಡುವ ಕಾರ್ಯವನ್ನು ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆ ನಾಗರಿಕರ ಹೊಣೆ ಎಂಬ ಸಂದೇಶ ರವಾನಿಸುವ ಮೂಲಕ ಅನೇಕರ ಮೆಚ್ಚುಗೆಗೆ ಈ ಕಾರ್ಯ ಪಾತ್ರವಾಗಿದೆ. ಇವರ ಕೆಲಸಕ್ಕೆ ಸ್ಥಳೀಯ ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕಿದೆ.