ರಾಯಚೂರು : ಈರುಳ್ಳಿ ಬೆಳೆಯುವುದರಲ್ಲಿ ಬೇರೆ ರಾಜ್ಯಗಳನ್ನ ಹೋಲಿಸಿದ್ರೆ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ, ಈರುಳ್ಳಿಗೆ ಮಾರುಕಟ್ಟೆಯಲ್ಲಿನ ಅವೈಜ್ಞಾನಿಕ ಬೆಲೆಯಿಂದ ರೈತರಿಗೆ ಸಂಕಷ್ಟ ಎದುರಾಗುತ್ತಿದೆ. ಹಾಗಾಗಿ ರೈತರು ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದಾರೆ.
ರಾಜ್ಯದಲ್ಲಿ ಪ್ರಮುಖವಾಗಿ ಅರ್ಕಾ ಪ್ರಗತಿ, ಅರ್ಕಾ ಕಲ್ಯಾಣ, ನಾಸಿಕ ರೆಡ್, ಅರ್ಕಾ ಬಿಂದು, ಪುಸಾ ಬಿಳಿ, ಉದಯಪಾದ 109,102,2013, ಪುಸಾ ರೆಡ್ ಹಾಗೂ ಬಿಜಾಪುರ ವೈಟ್ ಈರುಳ್ಳಿಯನ್ನ ಬೆಳೆಯಲಾಗುತ್ತದೆ. ಆದರೆ, ರೈತರ ಫಸಲು ಬಂದಾಗ ಮಾತ್ರ ಬೆಲೆ ಸಿಕ್ಕಲ್ಲ. ಇದಕ್ಕೆ ನಾನಾ ಕಾರಣಗಳಿವೆ. ಆದರೆ, ರಾಯಚೂರು ಕೃಷಿ ವಿವಿ ಕೃಷಿ ಇಂಜಿನಿಯರಿಂಗ್ ಕಾಲೇಜು, ಒಣಗಿಸಿ ಕತ್ತರಿಸಿ ಈರುಳ್ಳಿಯನ್ನು ಮಾರಾಟ ಮಾಡುವುದರಿಂದ ಬೆಳೆಗಾರ ಲಾಭ ಪಡೆಯಬಹುದಾಗಿದೆ ಎನ್ನುತ್ತಿದೆ.
ಗುಣಮಟ್ಟ ಹೊಂದಿರುವ ಈರುಳ್ಳಿಯನ್ನು ಮೇಲಿನ ಸಿಪ್ಪೆ ಹಾಗೂ ಬೇರುಗಳನ್ನು ಬೇರ್ಪಡಿಸಿ. ಸಿಪ್ಪೆ ತೆಗೆದ ಈರುಳ್ಳಿಗಳನ್ನ ಶೇ.1% ಸೋಡಿಯಂ ಹೈಪೊಕ್ಲೋರೆಟ್ ದ್ರಾವಣದಲ್ಲಿ ಅದ್ದಿ ತೆಗೆಯಬೇಕು. ಈ ವಿಧಾನದಿಂದ ಶಿಲೀಂದ್ರಗಳ ಬೆಳವಣಿಗೆ ತಪ್ಪಿಸಬಹುದು. ಸಿಪ್ಪೆ ತೆಗೆದು ಉಪಚರಿಸಿದ ಈರುಳ್ಳಿಗಳನ್ನು ಮೋಟಾರು ಚಾಲಿತ ಕತ್ತರಿಸುವ ಯಂತ್ರದಿಂದ 2 ರಿಂದ 5 ಮಿ.ಮೀ. ದಪ್ಪವಿರುವಂತೆ ಕತ್ತರಿಸಿಕೊಂಡು 0.2% ಪೊಟಾಷಿಯಂ ಮೆಟಾಬೈಸಲ್ಫೇಟ್ ದ್ರಾವಣದಲ್ಲಿ 10 ನಿಮಿಷಗಳವರೆಗೆ ಅದ್ದಿ ತೆಗೆಯಬೇಕು.
ಹೀಗೆ ಉಪಚರಿಸಿದ ತುಂಡುಗಳನ್ನು ಸೌರ ಶಾಖಾ ಪೆಟ್ಟಿಗೆ ಇಲ್ಲವೇ ಯಾಂತ್ರಿಕ ಶಕ್ತಿಯಿಂದ ಒಣಗಿಸುವ ಯಂತ್ರದಲ್ಲಿ 50-55 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನದಲ್ಲಿ ಒಣಗಿಸಬೇಕು. ಬಳಿಕ ಸೌರ ಶಾಖ ಪೆಟ್ಟಿಯಲ್ಲಿ 15ರಿಂದ 17 ಗಂಟೆ ಹಾಗೂ ವಿದ್ಯುತ್ ಚಾಲಿತ ಒಣಗಿಸುವ ಯಂತ್ರದಲ್ಲಿ 12ರಿಂದ 14 ಗಂಟೆ ಈ ವಿಧಾನ ಅನುಸರಿಸಲು 55ರಿಂದ 60 ರೂಪಾಯಿಯವರೆಗೆ ವೆಚ್ಚ ತಗುಲಿದೆ. ಸರಿ ಸುಮಾರು ಗುಣಮಟ್ಟದ 8 ಕೆಜಿ ಸಿಪ್ಪೆ ತೆಗೆದ ಈರುಳ್ಳಿಯಿಂದ 1 ಕೆಜಿ ಒಣಗಿಸಿದ ಈರುಳ್ಳಿ ಮಾಡಬಹುದಾಗಿದೆ. ಇದಕ್ಕೆ ಮಾರುಕಟ್ಟೆಯಲ್ಲಿ 150 ರೂಪಾಯಿಗೆ ಮಾರಾಟವಾಗುತ್ತದೆ.
ಈಗಾಗಲೇ ಬಾಗಲಕೋಟೆ, ಧಾರವಾಡ, ವಿಜಯಪುರ ಜಿಲ್ಲೆ ಸೇರಿ ನಾನಾ ಜಿಲ್ಲೆಗಳ ರೈತರು ಈ ತಂತ್ರಜ್ಞಾನವನ್ನು ಆಳವಡಿಸಿಕೊಳ್ಳಲು ಮುಂದೆ ಬಂದಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಈ ತಂತ್ರಜ್ಞಾನ ಆಳವಡಿಸಿಕೊಂಡರೆ ಅಧಿಕ ಲಾಭ ದೊರೆಯಲಿದೆ. ಸಣ್ಣ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿದರೆ, ಸ್ಥಳೀಯವಾಗಿ ಬಿರಿಯಾನಿ ಹೌಸ್ಗಳಲ್ಲಿ, ಫಾಸ್ಟ್ ಪುಡ್ ಸೆಂಟರ್ಗಳಲ್ಲಿ ಇವುಗಳನ್ನು ಮಾರಾಟ ಮಾಡಿ ಲಾಭ ಪಡೆಯಬಹುದಾಗಿದೆ. ರೈತರು ಈ ತಂತ್ರಜ್ಞಾನ ಅಳವಡಿಸಿಕೊಳ್ಳಲು ಮುಂದೆ ಬಂದರೆ ಪೂರಕ ಮಾರ್ಗದರ್ಶನ, ಮಾರುಕಟ್ಟೆ ವ್ಯವಸ್ಥೆ, ಟ್ರೈನಿಂಗ್ ನೀಡುವುದಾಗಿ ಕೃಷಿ ವಿವಿಯ ಅಧಿಕಾರಿಗಳು ತಿಳಿಸಿದ್ದಾರೆ.