ರಾಯಚೂರು : ನಗರಸಭೆಯಲ್ಲಿ ಪ.ಜಾತಿ , ಅಲೆಮಾರಿ ಜನಾಂಗಕ್ಕೆ ಸೇರಿದ ಸದಸ್ಯೆ ರೇಣಮ್ಮ ಅವರ ಜಾತಿ ಕುರಿತು ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡಿರುವ ತೀರ್ಪನ್ನು ಪುನರ್ ಪರಿಶೀಲನೆ ಮಾಡಬೇಕು ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ ಕುಮಾರ್ ಕೊತ್ತಗೇರಿ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಗರಸಭೆ ಸದಸ್ಯೆ ರೇಣಮ್ಮ ಜಾತಿ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಾತಿ ಪರಿಶೀಲನಾ ಸಮಿತಿಯೇ ಅವೈಜ್ಞಾನಿಕವಾಗಿದೆ. ಸಮಿತಿ ಸದಸ್ಯರಲ್ಲಿ ಜಾತಿ ಕುರಿತು ಜ್ಞಾನ ಉಳವಂತರು,ಮಾನವಶಾಸ್ತ್ರಜ್ಞರು, ಕುಲಶಾಸ್ತ್ರಜ್ಞರು,ಸಂಸ್ಕೃತಿ ಅಧ್ಯಯನಕಾರರು ಇಲ್ಲದೆ, ಪೂರ್ವ ಪರ್ವ ಪರಿಶೀಲನೆ ಮಾಡದೆ ತೀರ್ಪು ನೀಡಿರುವುದು ಅಲೆಮಾರಿ ಸಮುದಾಯಕ್ಕೆ ಮಾಡಿದ ಅನ್ಯಾಯವಾಗಿದೆ.
ಸುಮಾರು 74 ಅಲೆಮಾರಿ ಸಮುದಾಯಗಳು ಇದ್ದು, ಊರಿನಿಂದ ಊರಿಗೆ ಅಲೆದಾಡುವ ಸಮುದಾಯಕ್ಕೆ ನಿರ್ದಿಷ್ಟ ನೆಲೆ ಇಲ್ಲದ ಕಾರಣ ಅವರ ವೃತ್ತಿಯ ಮೇಲೆ ಜಾತಿ ನಿರ್ಧಾರ ಮಾಡಲಾಗುತ್ತಿದ್ದು, ಭಾಷಾ ವ್ಯತ್ಯಾಸದಿಂದ ಈ ಸಮಸ್ಯೆ ಉಂಟಾಗಿದೆ. ಹೀಗಾಗಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ನೀಡಿರುವ ತೀರ್ಪು ಪುನರ್ ಪರಿಶೀಲನೆ ಮಾಡಬೇಕು, ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದ್ರು.
ರಾಜ್ಯದಲ್ಲಿ ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ನಗರಸಭೆ, ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್ಸಿ ,ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ ಎಸ್ಸಿ,ಎಸ್ಟಿ, ಅಲೆಮಾರಿ ಜನಾಂಗದವರಿಗೆ ರಾಜಕೀಯ ಪಕ್ಷಗಳು ಆದ್ಯತೆ ಮೇರೆಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿದರು.