ರಾಯಚೂರು(ಲಿಂಗಸೂಗೂರು): ಉತ್ತರಪ್ರದೇಶದ ಹಥ್ರಾಸ್ನ ಆಡಳಿತ ವ್ಯವಸ್ಥೆ, ಪರೋಕ್ಷ ಬೆಂಬಲದಿಂದ ಅತ್ಯಾಚಾರ, ಕೊಲೆ ಪ್ರಕರಣ ಮುಚ್ಚಿ ಹಾಕಿರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲೆಯ ಲಿಂಗಸುಗೂರು ತಾಲೂಕು ಮಯದಗಲ್ಲ ಪಟ್ಟಣದಲ್ಲಿ ಕರವೇ ಅಧ್ಯಕ್ಷ ಎಸ್ ಎ ನಯೀಮ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರಾಷ್ಟ್ರಪತಿಗಳು ಆದಿತ್ಯನಾಥ್ ಸರ್ಕಾರ ವಜಾಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ಕುಮ್ಮಕ್ಕು ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂತ್ರಸ್ತ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆ ನೀಡಬೇಕು. ಕೂಡಲೇ ಕೇಂದ್ರ ಸರ್ಕಾರ ಪರಿಹಾರ ಘೋಷಿಸಬೇಕು. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೊಳಪಡಿಸಬೇಕು. ಪರಿಶಿಷ್ಟರ ಮೇಲೆ ನಡೆಯುತ್ತಿರುವ ಕೊಲೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಲು ವಿಶೇಷ ಕಾನೂನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಯುಪಿಯಲ್ಲಿ ಆದಿತ್ಯನಾಥ್ ನೇತೃತ್ವದ ಸರ್ಕಾರ ವಜಾಗೊಳಿಸಲು ಆಗ್ರಹಿಸಿ ಲಿಂಗಸುಗೂರು ವಾಲ್ಮೀಕಿ ನಾಯಕ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪರಿಶಿಷ್ಟ ಪಂಗಡದ ಯುವತಿಯೋರ್ವಳ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆದಿರುವುದು ವಿಷಾದನೀಯ ಸಂಗತಿ. ಈ ಘಟನೆ ಜರುಗಲು ಪರೋಕ್ಷವಾಗಿ ಆಡಳಿತ ಬೆಂಬಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು. ಸಂತ್ರಸ್ತ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ ನೀಡುವ ಜೊತೆಗೆ 10 ಕೋಟಿ ರೂ. ಪರಿಹಾರ ಘೋಷಿಸಬೇಕು. ದುಷ್ಕರ್ಮಿಗಳನ್ನು ಬಂಧಿಸಿ ಸಾರ್ವಜನಿಕವಾಗಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ವಾಲ್ಮೀಕಿ ನಾಯಕ ಸಮಾಜದ ಮುಖಂಡರು ನೇತೃತ್ವ ವಹಿಸಿದ್ದರು.