ರಾಯಚೂರು: ಜಿಲ್ಲೆಯ ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದರು.
ಯರಮರಸ್ ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಿಲ್ಲ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಇದೇ ಮಾತನನ್ನು ಹೇಳಿದ್ದಾರೆ ಎಂದರು.
ದೇವದುರ್ಗದ ಗಾಣಧಾಳ ಗ್ರಾಮದ ರೈತ ಪ್ರಭುರೆಡ್ಡಿ 2 ಗುಂಟೆ ಜಮೀನಿನಲ್ಲಿ ನನ್ನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಅವರ ಮನೆಗೆ ಭೇಟಿ ನೀಡುತ್ತೇನೆ. ಮುಂದಿನ 2023ರ ವಿಧಾನಸಭೆ ಚುನಾವಣೆ ಎದುರಾಗಲಿದೆ. ಈಗ ನಾನು ಯಾರನ್ನೂ ನಿಂದನೆ ಮಾಡುವುದಿಲ್ಲ. ಪಕ್ಷ ಕಟ್ಟುವುದಲ್ಲಿ ಸಂಪೂರ್ಣ ಸಕ್ರಿಯವಾಗಿರುತ್ತೇನೆ. ಅಸ್ಥಿರತೆಗೆ ನಾನು ಅವಕಾಶ ನೀಡುವುದಿಲ್ಲ. ಜಾತ್ಯತೀತ ಜನತಾದಳದ ವರಿಷ್ಠನಾಗಿ ತೀರ್ಮಾನ ಮಾಡಿದ್ದೇನೆ.
ಪ್ರಾದೇಶಿಕ ಪಕ್ಷ ಕಟ್ಟುವುದಕ್ಕೆ ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ. ನಮ್ಮಲ್ಲಿಯೂ 34 ಜನ ಶಾಸಕರಿದ್ದಾರೆ. ನಾವು ವಿಲೀನ ಆಗುತ್ತಾರೆ ಅಂತಾರೆ, ನಾನು ಯಾರ ಬಗ್ಗೆ ಟೀಕೆ ಮಾಡಲ್ಲ. ಕುಮಾರಸ್ವಾಮಿ ಸಿಎಂ ಆಗಬೇಕು ಅಂತಾ ಯಾರ ಮನೆಗೂ ಹೋಗಿಲ್ಲ. ಗುಲಾಂನಬಿ ಆಜಾದ್ ಹಾಗೂ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಗುಲಾಂನಬಿ ಆಜಾದ್ ಅವರೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಕಾರಣರಾಗಿದ್ದರು. ನನ್ನ ಮಗನಿಗೆ ಎರಡು ಮೇಜರ್ ಸರ್ಜರಿ ಆಗಿದೆ ಅಂದಿದ್ದೆ. ಸೋನಿಯಾ ಗಾಂಧಿ ಮಾತುಕತೆ ನಂತರ ಕುಮಾರಸ್ವಾಮಿ ಸಿಎಂ ಆಗಿದ್ರು.
ಸದ್ಯ ಸಿಎಂ ಯಡಿಯೂರಪ್ಪ ಬಗ್ಗೆ ನಾನು ಯಾವುದೇ ಆರೋಪ ಮಾಡುವುದಿಲ್ಲ. ನನ್ನ ಶರೀರದಲ್ಲಿ ಜೀವ ಹಾಗೂ ಶಕ್ತಿ ಇರುವವರೆಗೂ ನಾನು ಪಕ್ಷ ಕಟ್ಟುತ್ತೇನೆ. ಚುನಾವಣೆ ಸಂದರ್ಭದಲ್ಲಿ ಟಿಕೆಟ್ ನೀಡುವ ವಿಚಾರದಲ್ಲಿ ನಾವು ತಪ್ಪು ಮಾಡಿದ್ದು, ಅದನ್ನ ಸರಿದೂಗಿಸುವ ಕೆಲಸ ಮಾಡಲಾಗುತ್ತದೆ ಎಂದರು.
ಕೃಷಿ ಕಾಯ್ದೆ ತಿದ್ದುಪಡಿ ವಿಧೇಯಕ ವಿರೋಧಿಸಿ ರೈತರು ಟ್ರ್ಯಾಕ್ಟರ್ ಪರೇಡ್ ವಿಚಾರದ ಬಗ್ಗೆ ಮಾತನಾಡಿದ ಹೆಚ್ಡಿಡಿ, ಕೃಷಿ ಮಸೂದೆಗೆ ಎರಡ್ಮೂರು ತಿಂಗಳ ಕಾಲಾವಕಾಶ ತೆಗೆದುಕೊಳ್ಳಿ. ಗಲಭೆ ಮಾಡಿದವರು ಯಾವ ಪಕ್ಷಕ್ಕೆ ಸೇರದವರುವೆಂಬ ಊಹಾಪೋಹಗಳು ಕೇಳಿ ಬರುತ್ತಿವೆ. ರೌಡಿ ಎಲಿಮೆಂಟ್ಸ್ ಮಾಡಿದ್ದಾರೆ ಎಂಬ ಊಹಾಪೋಹಗಳಿವೆ. ಈ ಬಗ್ಗೆ ಪರಿಶೀಲಿಸಿ ಎಂದು ಹೇಳಿದ್ರು.
ಓದಿ: ಸಂಸತ್ತಿನ ಅಧ್ಯಕ್ಷರ ಜಂಟಿ ಭಾಷಣಕ್ಕೆ ಹಾಜರಾಗುವುದಿಲ್ಲ ಎಂದ ಹೆಚ್ಡಿಡಿ
ರೈತರ ಹೋರಾಟದ ಹಿನ್ನೆಲೆ ಕಾಂಕ್ರೀಟ್ ಗೋಡೆ ಕಟ್ಟುವ ಅವಶ್ಯಕತೆ ಇರಲಿಲ್ಲ. ರೈತರ ಮೇಲೆ ಅಷ್ಟೊಂದು ಕಠಿಣ ಕ್ರಮ ಯಾಕೆ?. ರೈತರ ಹೋರಾಟ ಪ್ರತಿಷ್ಠೆಯಾಗಬಾರದು. ರೈತರಿಗೆ ಅನಗತ್ಯ ಹಿಂಸೆ ಕೊಡಬಾರದು ಎಂದು ಸಂಸತ್ನಲ್ಲಿ ಹೇಳಿದ್ದೇನೆ. ಖಲಿಸ್ತಾನ, ಉಗ್ರರು ಗಲಭೆ ಮಾಡಿರುವುದರ ಬಗ್ಗೆ ಇಲ್ಲಿ ನಾನು ಏನು ಹೇಳಲ್ಲ. ಗೃಹ ಸಚಿವರು ತನಿಖೆ ನಂತರ ಇದರ ಬಗ್ಗೆ ಹೇಳಲಿ. ರಾಜ್ಯದಲ್ಲಿ ಸೆಕ್ಯೂಲರ್ ಲೀಡರ್ ಸಿದ್ದರಾಮಯ್ಯ ಅಂದ್ರೆ ಒಪ್ತೀರಾ?, ಜೆಡಿಎಸ್ ಜಾತ್ಯಾತೀತ ಪಕ್ಷವಾಗಿದೆ ಎಂದು ಹೇಳಿದ್ರು.
ದೇಶದಲ್ಲಿ ನಾಲ್ಕು ರಾಜ್ಯಗಳಲ್ಲಿ ನಡೆಯುವ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನ ಸಿಗಲ್ಲ ಎಂಬ ಭಾವನೆಯಿದೆ. ಪಶ್ಚಿಮ ಬಂಗಾಳದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಧೈರ್ಯ ಮೆಚ್ಚುವಂತದ್ದು. ಮತಗಳು ಕಡಿಮೆ ಬಂದ್ರೂ ಈ ಬಾರಿ ಮಮತಾ ಮತ್ತೆ ಅಧಿಕಾರ ಪಡೆಯುವ ಸಾಧ್ಯತೆಯಿದೆ. ಇಡೀ ಬಿಜೆಪಿ ಟೀಮ್ ಪ.ಬಂಗಾಳದಲ್ಲಿ ನೆಲೆಯೂರಿದೆ. ಸಚಿವರು, ಶಾಸಕರು ಪಕ್ಷ ಬಿಟ್ಟಿರೋದು ಸ್ವಲ್ಪ ಹಿನ್ನೆಡೆಯಾಗಬಹುದು. ಆದ್ರೆ ಮೂರನೇ ಬಾರಿಯೂ ಮಮತಾ ಸಿಎಂ ಆಗುವ ಸಾಧ್ಯತೆಯಿದೆ ಎಂದರು.