ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಕುಟುಂಬ ಸಮೇತರಾಗಿ ಭೇಟಿ ನೀಡಿದ್ರು.
ಆರಂಭದಲ್ಲಿ ಗ್ರಾಮ ದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದ್ರು. ಬಳಿಕ ರಾಯರ ಬೃಂದಾವನಕ್ಕೆ ತೆರಳಿ ವಿಶೇಷ ಪೂಜೆ ನೇರವೇರಿಸಿ, ಚಿನ್ನದ ರಥೋತ್ಸವ ಮತ್ತು ಬೆಳ್ಳಿ ರಥೋತ್ಸವ ಎಳೆಯುವ ಮೂಲಕ ಹರಕೆಯನ್ನ ತೀರಿಸಿದ್ರು. ಈ ವೇಳೆ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರು ಚಿನ್ನದ ರಥೋತ್ಸವಕ್ಕೆ ಪೂಜೆ ಸಲ್ಲಿಸಿ, ರೆಡ್ಡಿ ಪರಿವಾರಕ್ಕೆ ಆಶೀರ್ವಾದ ಮಾಡಿದ್ರು.
ಪೂಜಾ ಕೈಂಕರ್ಯಗಳನ್ನು ಮುಗಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ನಾವು ಚಿಕ್ಕಂದಿನಿಂದಲೂ ರಾಯರ ಮಠಕ್ಕೆ ಬರುತ್ತಿದ್ದೇವೆ. ನಮ್ಮ ತಂದೆ ತಾಯಿಯವರ ಜೊತೆಗೂ ಕುಟುಂಬ ಸಮೇತರಾಗಿ ನಾವು ಬರುತ್ತಿದ್ದೆವು. ನಮ್ಮ ಜೀವನದ ಸಾಕ್ಷತ್ಕಾರ ಅಂದ್ರೆ ರಾಘವೇಂದ್ರ ಸ್ವಾಮೀಜಿಗಳು. ಅವರ ಮಹಿಮೆ ಎಷ್ಟು ಬಣ್ಣಿಸಿದ್ರೂ ಕಡಿಮೆ. ಹೀಗಾಗಿ ಅವರ ಆಶೀರ್ವಾದ ಪಡೆಯಲು ಬಂದಿದ್ದೇವೆ ಎಂದರು.
ಭಗವಂತ ಆಂಧ್ರ ಪ್ರದೇಶ ಹಾಗೂ ಸಮಸ್ತ ಭಾರತಕ್ಕೆ ಒಳ್ಳೆಯದನ್ನೇ ಮಾಡಿದ್ದಾನೆ ಎಂದ ಅವರು, ಆಂಧ್ರದ ಮಾಜಿ ಸಿಎಂ ವೈ.ಎಸ್.ರಾಜಶೇಖರೆಡ್ಡಿ ದೇವರ ಸ್ವರೂಪವಾಗಿದ್ದರು ಎಂದು ಈ ಸಂದರ್ಭ ಸ್ಮರಿಸಿದರು.