ರಾಯಚೂರು: ಹಿಂದಿನ ಸರ್ಕಾರದ ಉದಾಸೀನತೆಯಿಂದ ಈಗ ಚೀನಾ ವಿನಾಕಾರಣ ದೇಶದಲ್ಲಿ ಗಡಿ ವಿಚಾರಕ್ಕೆ ಗೊಂದಲ ಸೃಷ್ಟಿಸುತ್ತಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪಂಚಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಪ್ರತಿಕ್ರಿಯಿಸಿದರು. ಜಿಲ್ಲೆಯ ಸಿಂಧನೂರು ತಾಲೂಕಿನ ಬಂಗಾರಿ ಕ್ಯಾಂಪ್‌ನ ಶ್ರೀ ಸಿದ್ಧಾಶ್ರಮದಲ್ಲಿ 9ನೇ ವರ್ಷದ ಶ್ರೀಗಣೇಶ ಗಾಯಿತ್ರೀ ದೇವಿಯ ರಥೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕಾಗಿತ್ತು. ನನಗೆ ಪ್ರಧಾನಿಮಂತ್ರಿ ನರೇಂದ್ರ ಮೋದಿಯವರ ಮೇಲೆ ವಿಶ್ವಾಸವಿದೆ. ಮೋದಿ ಇಂತಹ ದುಷ್ಟಶಕ್ತಿಗಳನ್ನು ನಿಯಂತ್ರಣ ಮಾಡಬೇಕು. ಭಾರತದ ಅಖಂಡತೆ ಉಳಿಸಿಕೊಂಡು, ಬೆಳೆಸಿಕೊಂಡು ಹೋಗಬೇಕು. ಈ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಂದಾಗಬೇಕು. ಚೀನಾ ತನ್ನ ಸರಹದ್ದು ಮೀರಿ ನಡೆದರೆ ತಕ್ಕಪಾಠ ಕಲಿಸಬೇಕು ಎಂದರು.
ಸಂವಿಧಾನದ ವಿಚಾರಗಳನ್ನು ಇಟ್ಟುಕೊಂಡು ಕ್ರಮ: ಪಂಚಮಸಾಲಿಗೆ ಮೀಸಲಾತಿ ನೀಡಲು ಸರ್ಕಾರಕ್ಕೆ ಗಡುವು ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾವುದೇ ಧರ್ಮದ ಒಳಪಂಗಡದ ಬಗ್ಗೆ ನಾವು ಹೆಚ್ಚು ಹೇಳುವುದಿಲ್ಲ. ಸರ್ಕಾರ ಸಂವಿಧಾನದ ವಿಚಾರಗಳನ್ನು ಇಟ್ಟುಕೊಂಡು ಕ್ರಮ ಕೈಗೊಳ್ಳುತ್ತೆ. ಯಾರೋ ಏನೋ ಗುಂಪು ಮಾಡಿ, ಸಂಘರ್ಷ ಉಂಟು ಮಾಡಿ, ಸರ್ಕಾರಕ್ಕೆ ಗಡುವು ಸಲ್ಲಿಸಿದ್ರೆ, ಅದು ಎಷ್ಟರ ಮಟ್ಟಿಗೆ ಸಫಲವಾಗುತ್ತೆ?. ಇದನ್ನು ರಾಜಕಾರಣಿಗಳು ಸ್ಪಷ್ಟಪಡಿಸಬೇಕು. ಇಂತಹ ವಿಚಾರದಲ್ಲಿ ಧರ್ಮ ಪೀಠಗಳ ಅಭಿಪ್ರಾಯ ಸಮಂಜಸ ಅನ್ನಿಸುವುದಿಲ್ಲ. ಆದ್ರೆ ವೀರಶೈವರು ಎಲ್ಲರೂ ಒಂದಾಗಿ ಚೆಂದಾಗಿ ಹೋಗಬೇಕು ಎಂದು ಹೇಳಿದರು.
ಪ್ರತಿಯೊಂದು ಒಳಪಂಗಡಗಳು ಸಹ ಸರ್ಕಾರದ ಸವಲತ್ತು ಬಯಸುವುದು ಸಹಜ. ಆದ್ರೆ ಸಂವಿಧಾನಕ್ಕೆ ಒಂದು ರೇಖೆ ಸೀಮೆಯಿದೆ. ಅದನ್ನು ಮೀರಿ ನಡೆಯಲು ರಾಜಕಾರಣಿಗಳಿಗೆ ಕೂಡ ಸಾಧ್ಯವಿಲ್ಲ. ಮೀಸಲಾತಿ ನೀಡುವ ಕುರಿತು ಸರ್ಕಾರ ಚಿಂತನೆ ಮಾಡುವುದು ಸೂಕ್ತ ಎಂದು ಹೇಳಿದರು.
ಇದನ್ನೂ ಓದಿ: ಮುರುಘಾ ಮಠ ಟ್ರಸ್ಟ್ಗೆ ಆಡಳಿತಾಧಿಕಾರಿ ನೇಮಕ: ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ನೇಮಕ ಮಾಡಿ ಸರ್ಕಾರದ ಆದೇಶ