ರಾಯಚೂರು: ಆಂಧ್ರಪ್ರದೇಶದಿಂದ ರಾಜ್ಯದೊಳಗೆ ಪ್ರವೇಶ ಮಾಡುವವರಿಗೆ ಕೊರೊನಾ ಪರೀಕ್ಷೆ ಮಾಡಲು ಆಂಧ್ರ-ಕರ್ನಾಟಕ ಗಡಿಯಾಗಿರುವ ತಾಲೂಕಿನ ಶಕ್ತಿನಗರ 2ನೇ ಕ್ರಾಸ್ ಬಳಿ ಗಡಿ ಚೆಕ್ ಪೋಸ್ಟ್ನಲ್ಲಿ ಕೊರೊನಾ ತಪಾಸಣೆ ಕೇಂದ್ರ ಸ್ಥಾಪಿಸಲಾಗಿದೆ.
ಆದರೆ ಚೆಕ್ ಪೋಸ್ಟ್ ಹಾಗೂ ತಪಾಸಣೆ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿರುವ ಆರೋಗ್ಯ ಇಲಾಖೆಯ ವೈದ್ಯರು, ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸದಿರುವ ದೃಶ್ಯ ಕಂಡುಬಂದಿದೆ.
ಮಾಧ್ಯಮದವರು ತಪಾಸಣೆ ಕೇಂದ್ರದ ಬಳಿ ತೆರಳಿದಾಗ ಚೆಕ್ ಪೋಸ್ಟ್‌ಗೆ ಬೀಗ ಹಾಕಲಾಗಿತ್ತು. ಜತೆಗೆ ಪಕ್ಕದಲ್ಲಿ ಬಿದರಿನಿಂದ ಹಾಕಲಾಗಿರುವ ಟೆಂಟ್ನಲ್ಲೂ ಯಾವುದೇ ಸಿಬ್ಬಂದಿ ಇರಲಿಲ್ಲ. ಇದರ ಪರಿಣಾಮ ಆಂಧ್ರದಿಂದ ಬರುವಂತಹ ವಾಹನಗಳು ಸರಾಗವಾಗಿ ರಾಜ್ಯದೊಳಗೆ ಪ್ರವೇಶ ಮಾಡುತ್ತಿದ್ದವು.
ಈ ನಿರ್ಲಕ್ಷ್ಯವನ್ನು ಮಾಧ್ಯಮದವರು ಚಿತ್ರಿಸುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಕರ್ತವ್ಯಕ್ಕೆ ನಿಯೋಜಿಸಿದ ವೈದ್ಯರು ಹಾಗೂ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಬಳಿಕ ವಾಹನಗಳನ್ನು ತಡೆದು ತಪಾಸಣೆ ಮಾಡಿ ಬಿಡಲು ಆರಂಭಿಸಿದರು.