ರಾಯಚೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗೆ ನೇಮಕಾತಿ, ವರ್ಗಾವಣೆ ಹಾಗೂ ಬಡ್ತಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಹಲವಾರು ಸಮಸ್ಯೆಗಳಿಂದ ಇಲ್ಲಿನ ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿದೆ. ಅದರೆ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕಾದ ವಿಧಾನ ಪರಿಷತ್ನ ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರ ಕ್ಷೇತ್ರದ ಸದಸ್ಯರಾದ ಶರಣಪ್ಪ ಮಟ್ಟೂರು ಹಾಗೂ ಚಂದ್ರಶೇಖರ ಪಾಟೀಲ್ ವಿಫಲರಾಗಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ಡಾ. ರಜಾಕ್ ಉಸ್ತಾದ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 2015ರಲ್ಲಿ ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇದ್ದ 1130 ಉಪನ್ಯಾಸಕರ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಅರ್ಜಿ ಕರೆದಿತ್ತು. ನಂತರ ಜೂನ್ 2016ರಲ್ಲಿ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಿ ಅಧಿಸೂಚನೆಯನ್ನು ಮಾರ್ಪಡಿಸಿ ನೇಮಕಾತಿ ಮುಂದುವರೆಸಲು ನಿರ್ಧರಿಸಿತ್ತು.
ನಂತರ 2017ರಲ್ಲಿ ಮತ್ತೊಮ್ಮೆ ಮರು ಹೊಂದಾಣಿಕೆ ಮಾಡಿಕೊಂಡು 1204 ಉಪನ್ಯಾಸಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ನೀಡಲಾಗಿತ್ತು. ಸದರಿ ಉಪನ್ಯಾಸಕರ ನೇಮಕಾತಿ ಪಂಚ ವಾರ್ಷಿಕ ಯೋಜನೆಯನ್ನಾಗಿಸಿ ಕೊನೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಗೊಂದಲಗಳ ನಡುವೆ ಫಲಿತಾಂಶ ಪ್ರಕಟಿಸಿದೆ. ಇತ್ತೀಚೆಗೆ 1:2 ಮೆರಿಟ್ ಪಟ್ಟಿಯನ್ನು ಪ್ರಕಟಿಸಿದ್ದು, ಸಾಮಾನ್ಯ ವಿಭಾಗದ ಕೋಟಾದಡಿ ಮಾತ್ರ ಹೈ.ಕ ಅಭ್ಯರ್ಥಿಗಳನ್ನು, ಉಳಿದ ವೃಂದದಲ್ಲಿ ಪರಿಗಣಿಸಿ ಇನ್ನಿತರೆ ಮೀಸಲಾತಿ ಕೋಟಾದಡಿ ರಾಜ್ಯಮಟ್ಟದಲ್ಲಿ ಹೆಚ್ಚು ಅಂಕ ಪಡೆದ ಹೈ.ಕ ಅಭ್ಯರ್ಥಿಗಳಿಗಿಗೆ ಸ್ಥಳೀಯ ವೃಂದದ ಮೆರಿಟ್ ಪಟ್ಟಿಯಲ್ಲಿ ಸ್ತಾನ ನೀಡಲಾಗಿತ್ತು. ಇದು ನಮ್ಮ ಹೋರಾಟದ ಪರಿಣಾಮವಾಗಿತ್ತು. ಹಲವಾರು ತೊಡಕುಗಳಿಂದ ಹೈ.ಕ ಭಾಗದ ಅಭ್ಯರ್ಥಿಗಳಿಗೆ ನಿರಂತರ ಅನ್ಯಾಯವಾಗುತ್ತಿತ್ತು. ಇದರ ವಿರುದ್ಧ ನಾವು ಸದಾ ಧ್ವನಿ ಎತ್ತುತ್ತಿದ್ದೇವೆ ಎಂದರು.
2015ರಿಂದ ಇಲ್ಲಿಯವರೆಗೆ ಈ ಭಾಗದ ಪ್ರೌಢ ಶಾಲಾ ಶಿಕ್ಷಕರ ಬಡ್ತಿ ಪ್ರಕ್ರಿಯೆ ತಡೆಹಿಡಿಯಲಾಗಿದ್ದು, ಇದರಿಂದ ಬಹಳಷ್ಟು ಶಿಕ್ಷಕರು ಶಿಕ್ಷಕರಾಗಿಯೇ ನಿವೃತ್ತಿ ಹೊಂದಿದಾರೆ. ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಾಗೂ ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಗುಣಮಟ್ಟ ಕ್ಷೀಣಿಸಿದೆ ಎಂದು ದೂರಿದರು.