ರಾಯಚೂರು: ಒಂದನೇ ತರಗತಿಯಿಂದ ಪಿಯುಸಿಯವರೆಗೆ ಪಠ್ಯಕ್ರಮದಲ್ಲಿ ಕಡ್ಡಾಯವಾಗಿ ಕೃಷಿ ಶಾಸ್ತ್ರ, ರೈತ ಶಾಸ್ತ್ರ ವಿಷಯವನ್ನ ಅಳವಡಿಸಬೇಕು ಎಂದು ಉಜ್ಜಿಯಿನಿ ಪೀಠದ ಶ್ರೀಜಗದ್ಗುರು ಸಿದ್ದಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಆಗ್ರಹಿಸಿದ್ದಾರೆ.
ರಾಯಚೂರಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬ 2ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಡೀ ದೇಶವೇ ಅನ್ನ ನೀಡುವ ಕೃಷಿ ಕ್ಷೇತ್ರದ ಬಗ್ಗೆ ಅಧ್ಯಯನ ಮಾಡಬೇಕಾದ್ರೆ, ಪಿಯುಸಿ ನಂತರ ಅಧ್ಯಯನ ಮಾಡುವುದಕ್ಕೆ ವ್ಯಾಸಂಗಕ್ಕೆ ಅವಕಾಶವಿದೆ. ಆದರೆ, ಒಂದನೇ ತರಗತಿಯಿಂದ ಇಲ್ಲ. ಹೀಗಾಗಿ 1ನೇ ತರಗತಿಯಲ್ಲಿ ಆಂಗ್ಲ ಭಾಷೆ, ಸಮಾಜ ಶಾಸ್ತ್ರ, ಕನ್ನಡ ಭಾಷೆ, ಗಣಿಕಶಾಸ್ತ್ರವನ್ನ ಹೇಗೆ ಅಭ್ಯಾಸ ಮಾಡುತ್ತೇವೆ. ಅದೇ ರೀತಿಯಲ್ಲಿ ಕೃಷಿ ಶಾಸ್ತ್ರ, ರೈತ ಶಾಸ್ತ್ರ, ವ್ಯವಸಾಯ ಶಾಸ್ತ್ರ ವಿಷಯವನ್ನ 1ನೇ ತರಗತಿಯಿಂದ ಪಿಯುಸಿವರೆಗೆ ಕಡ್ಡಾಯವಾಗಿ ವಿಷಯವನ್ನ ಓದಿದಾಗ ಮಾತ್ರ ಕೃಷಿ ಕ್ಷೇತ್ರ ಉಳಿಯುವಿಕೆ ಸಾಧ್ಯವಾಗುತ್ತದೆ. ಯಾಕಂದ್ರೆ, ದೊಡ್ಡ ಪಟ್ಟಣಗಳಲ್ಲಿ ವಾಸಿಸುವ ಜನರಿಗೆ ಕೆಲ ದವಸ,ಧಾನ್ಯಗಳು ಮತ್ತು ಹಣ್ಣುಗಳ ಪರಿಚಯವಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಕೃಷಿ ಪರಿಸ್ಥಿತಿ ಹದಗೆಡುತ್ತದೆ. ಹೀಗಾಗಿ ಘನವೆತ್ತ ಸರ್ಕಾರಗಳು ಕೃಷಿ ಕ್ಷೇತ್ರದ ಉಳಿಯುವಿಕೆಗೆ ಕಡ್ಡಾಯವಾಗಿ 1ನೇ ತರಗತಿಯಿಂದ ಕೃಷಿ ಶಾಸ್ತ್ರವನ್ನ ಪಠ್ಯಕ್ರಮದಲ್ಲಿ ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ, ಗೋಹತ್ಯೆ ನಿಷೇಧದ ಬಗ್ಗೆ ವ್ಯಂಗ್ಯವಾಡಿದ್ದ ಮುಖ್ಯಮಂತ್ರಿ ಈಗ ಮೂಲೆ ಗುಂಪಾಗಿದ್ದಾರೆ. ಗೋ ಹತ್ಯೆ ನಿಷೇಧ ಮಾಡಬೇಕೆಂದ ಅನೇಕ ಮಠಾಧೀಶರು ಅಂದಿನ ಮುಖ್ಯಮಂತ್ರಿಗಳಲ್ಲಿ ಮನವಿ ಸಲ್ಲಿಸಿದ್ರು. ಅಂದು ಸಿಎಂ ಆಗಿದ್ದಾಗ ಸ್ವಾಮೀಜಿಗಳಿಗೇನು ಗೊತ್ತು ಗೋಮಾಂಸ ರುಚಿ ಎಂದು ಎನ್ನುವ ಮೂಲಕ ಗೋಹತ್ಯೆ ನಿಷೇಧದ ಬಗ್ಗೆ ಟೀಕೆ ಮಾಡಿದ್ದರು. ಆದರೆ, ಅಂದಿನ ಪಾಪದ ಫಲ ಇಂದು ಅವರು ಅನುಭವಿಸುವ ಮೂಲಕ ಅಧಿಕಾರದಿಂದ ಮೂಲೆ ಗುಂಪು ಆಗಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ನೀಡಿದ ಸ್ವಾಮೀಜಿ,ಈಗಿನ ಸರ್ಕಾರ ಗೋಹತ್ಯೆಯನ್ನ ತಡೆಯಬೇಕು. ಯಾಕಂದ್ರೆ, ಭಾರತೀಯ ಪರಂಪರೆಯಲ್ಲಿ ಗೋವುಗಳಿಗೆ ಸಾಕಷ್ಟು ಮಹತ್ವವಿದೆ ಎಂದರು.