ರಾಯಚೂರು: ಜಿಲ್ಲೆಯಲ್ಲಿ 2009 ರಲ್ಲಿ ಸಂಭವಿಸಿದ ನೆರೆ ಹಾವಳಿಯಲ್ಲಿ ದೇವದುರ್ಗ ತಾಲೂಕಿನ ಹೇರುಂಡಿ ಹಾಗೂ ವೀರಗೋಟ ಗ್ರಾಮದ ಸಂತ್ರಸ್ತರಿಗೆ ಪುನರ್ ವಸತಿ ಕಲ್ಪಿಸಲಾಗಿದೆ. ಆದರೆ ಈವರೆಗೆ ದಲಿತ ಹಾಗೂ ಮಾದಿಗರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಆರೋಪಿಸಿ, ಫೆ.18 ರೊಳಗೆ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದಿದ್ದಲ್ಲಿ ವೀರಗೋಟಾದಲ್ಲಿ ಹಮ್ಮಿಕೊಂಡ ಐತಿಹಾಸಿಕ ಇಷ್ಟಲಿಂಗ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಗುವುದು ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಎಚ್ಚರಿಸಿದೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಗೆ ನುಗ್ಗಿ ಪ್ರತಿಭಟನೆ ನಡೆಸಿದ ಸಂತ್ರಸ್ತರು, 2009-10ನೇ ಸಾಲಿನಲ್ಲಿ ನೆರೆ ಸಂತ್ರಸ್ತರಿಗೆ ಮನೆ ನಿರ್ಮಿಸಿ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವಂತೆ ಗ್ರಾಮಸಭೆ ನಡೆಸಿ, ಸಹಾಯಕ ಆಯುಕ್ತರಿಗೆ ಹಾಗೂ ಹಿಂದಿನ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಆದರೆ ಈವರೆಗೆ ಹಕ್ಕು ಪತ್ರ ನೀಡಿಲ್ಲ ಎಂದು ಆರೋಪಿಸಿದರು.
ಮತ್ತೊಂದೆಡೆ ದೇವದುರ್ಗ ಶಾಸಕ ಶಿವನಗೌಡ ನಾಯಕ ಅಲ್ಲಿನ ದಲಿತರ ಹಾಗೂ ಸವರ್ಣೀಯರ ನಡುವೆ ಎತ್ತಿಕಟ್ಟಿ ತಾರತಮ್ಯ ಮಾಡುತ್ತಿದ್ದಾರೆ. ಆ ಮೂಲಕ ಅಸ್ಪೃಶ್ಯತೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಈಗಿನ ಡಿಸಿ ಶರತ್ ಬಿ. ಅವರು ಹಕ್ಕು ಪತ್ರ ವಿತರಿಸಲು ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ದೂರಿದರು.
ಇದೇ ತಿಂಗಳು 18 ರೊಳಗಾಗಿ ಸಂತ್ರಸ್ತರಿಗೆ ಹಕ್ಕು ಪತ್ರ ನೀಡದೇ ಇದ್ದಲ್ಲಿ ರಾಜ್ಯದ ದಲಿತರನ್ನು ಒಗ್ಗೂಡಿಸಿ ವೀರಗೋಟದಲ್ಲಿ ನಡೆಯುವ ಇಷ್ಟಲಿಂಗ ಪೂಜೆಗೆ ಅಡ್ಡಿಪಡಿಸಲಾಗುವುದು ಎಂದು ಪ್ರತಿಭಟನಕಾರರು ಎಚ್ಚರಿಸಿದರು.