ರಾಯಚೂರು: ಕಾಂಗ್ರೆಸ್ ಮುಖಂಡ ಡಿಕೆಶಿ ಅವರ ಮನೆಯ ಮೇಲೆ ಸಿಬಿಐ ದಾಳಿ ಹಿಂದೆ ಯಾವುದೇ ರೀತಿಯ ರಾಜಕೀಯವಿಲ್ಲ, ಅವರು ಸೀತೆಯಷ್ಟೇ ಪವಿತ್ರರಾಗಿದ್ದರೆ ತನಿಖೆ ಎದುರಿಸಲಿ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ನಗರದ ಖಾಸಗಿ ಹೋಟೆಲ್ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಿಂದೆ ಡಿಕೆಶಿ ಅವರ ಮನೆಯ ಮೇಲೆ ದಾಳಿಯಾದ ಸಂದರ್ಭದಲ್ಲಿ ಅನೇಕ ದಾಖಲೆಗಳು, ಹವಾಲ ಹಣ ಸಿಕ್ಕಿದ್ದು, ಅಲ್ಲದೇ ಜೈಲಿಗೆ ಹೋಗಿ ಬಂದಿದ್ದಾರೆ. ಹಿಂದೆ ಯಡಿಯೂರಪ್ಪ ಅವರ ಮೇಲು ದಾಳಿ ಆಯಿತು ಜೈಲಿಗೆ ಹೋಗಿ ನಿರಪರಾಧಿ ಎಂದು ಸಾಬೀತಾಗಿದೆ. ಬಿಜೆಪಿಯವರ ಮನೆ ಮೇಲೆ ದಾಳಿ ನಡೆದರೆ ರಾಜಕಾರಣವಲ್ಲ, ಅದೇ ದಾಳಿ ಅವರ ಮೇಲೆ ನಡೆದರೆ ರಾಜಕಾರಣ ಎನ್ನುವುದು ಎಷ್ಟು ಸರಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಡಿಕೆಶಿ ಸೀತೆಯಷ್ಟೇ ಪವಿತ್ರರಾಗಿದ್ದರೆ ತನಿಖೆ ಎದುರಿಸಲಿ ಎಂದರು.
ಕುರುಬ ಸಮಾಜಕ್ಕೆ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, ಕುರುಬ ಸಮಾಜಕ್ಕೆ ಮೀಸಲಾತಿ ನೀಡುವ ಕುರಿತು ಚರ್ಚೆ ನಡೆಯುತ್ತಿದ್ದು, ರಾಜಕಾರಣಿಗಳು, ಸ್ವಾಮೀಜಿಗಳು, ಜನರ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಾಗಮೋಹನ ದಾಸ್ ವರದಿ ಪ್ರಕಾರ ಮೀಸಲಾತಿ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದು, ಇದರಲ್ಲಿ ಯಶಸ್ವಿಯಾಗುವ ಭರವಸೆ ಇದೆ ಎಂದರು.
ಗ್ರಾಮ ಪಂಚಾಯತಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯ ಸರ್ಕಾರ ಗ್ರಾ.ಪಂ ಚುನಾವಣೆ ಎದುರಿಸಲು ಸಿದ್ದವಿದ್ದು, ಕೊರೊನಾ ಹಿನ್ನೆಲೆ ಚುನಾವಣೆ ನಡೆಸುವುದು ಸೂಕ್ತವಲ್ಲ ಎನ್ನುವ ಅಭಿಪ್ರಾಯವಿದೆ ಹಾಗಾಗಿ ಇದು ಚುನಾವಣೆ ಆಯೋಗದ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬದ್ದವಾಗಿದೆ ಎಂದರು.