ಲಿಂಗಸುಗೂರು (ರಾಯಚೂರು): ಸಾರ್ವಜನಿಕ ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ದಾಖಲಾದವರಿಗೆ ಅಗತ್ಯ ಚಿಕಿತ್ಸೆ ನೀಡದಿರುವ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಿಂಗಸುಗೂರು ಬೈಪಾಸ್ ರಸ್ತೆಯಲ್ಲಿ ಸೋಮವಾರ ಸಂಜೆ ವಾಯುವಿಹಾರಕ್ಕೆ ಹೋಗಿ ಬರುತಿದ್ದ ನಿವೃತ್ತ ತಹಶೀಲ್ದಾರ್ ಅಮರೇಶಪ್ಪ ಹುನೂರು, ನಿವೃತ್ತ ಎಎಸ್ಐ ಜಯಸಿಂಗ್ ಅವರಿಗೆ ಬೈಕ್ ಸವಾರ ಶ್ರೀನಿವಾದ ರಾಯಭಾಗ ಡಿಕ್ಕಿ ಹೊಡೆದಿದ್ದು ಮೂವರು ಗಾಯಗೊಂಡಿದ್ದಾರೆ.
ತಜ್ಞ ವೈದ್ಯರು ವೈದ್ಯಕೀಯ ಪರೀಕ್ಷೆಗಳಿಗೆ ಮೀನ ಮೇಷ ಎಣಿಸಿದ್ದಾರೆಂದು ನೆರೆದಿದ್ದ ನಾಗರಿಕರು ಆಡಳಿತ ವ್ಯವಸ್ಥೆ ವಿರುದ್ಧ ಕಿಡಿಕಾರಿದರು.
ವೈದ್ಯರು ಆಸ್ಪತ್ರೆಗೆ ಬರದೆ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಅವ್ಯವಸ್ಥೆಗೆ ಕಾರಣ. ಹಾಗಾಗಿ ಜನರು ರೊಚ್ಚಿಗೇಳುತ್ತಾರೆ ಎಂದು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿ ಆರೊಪಿಸಿದರು.