ರಾಯಚೂರು: ಸಮಾಜದ ಮುಂಚೂಣಿಗೆ ಬಂದು ಗುರುತಿಸಿಕೊಳ್ಳಲು ಹೂಗಾರ ಬಂಧುಗಳು ಶೈಕ್ಷಣಿಕವಾಗಿ ಬೆಳೆದು ನಿಲ್ಲಬೇಕು ಎಂದು ಹೂಗಾರ ಸಮಾಜದ ಮುಖಂಡ ವಿಶ್ವನಾಥ ಹೂಗಾರ ಕರೆ ನೀಡಿದರು.
ನಗರದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹೂಗಾರ ಮಾದಯ್ಯ ಜಯಂತಿಯಲ್ಲಿ ಮಾತನಾಡಿದ ಅವರು, ಹೂಗಾರ ಬಂಧುಗಳಾದ ನಾವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬಹಳಷ್ಟು ಹಿಂದೆ ಉಳಿದಿದ್ದೇವೆ. ಇತರೆ ಸಮುದಾಯಗಳ ಜೊತೆ ಬೆಳೆದು ನಿಲ್ಲಲು ಸಂಘಟಿತ ಹೋರಾಟಕ್ಕೂ ಮುಂದಾಗುವ ಅನಿವಾರ್ಯತೆ ಬಂದಿದೆ ಎಂದರು.
ಹೂಗಾರ ಸಮಾಜದ ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ ಹೂಗಾರ ಮಾತನಾಡಿ, ಬಸವಾದಿ ಶರಣರಂತೆ ಹೂಗಾರ ಮಾದಯ್ಯ ಶರಣರು ವಚನಗಳ ಮೂಲಕ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರ ವಚನಗಳ ಅಧ್ಯಯನ ನಡೆಸಲು ಸರ್ಕಾರ ಮುಂದಾಗಬೇಕು ಎಂದು ಮನವಿ ಮಾಡಿದರು.