ರಾಯಚೂರು: ಹೊಸ ಶಿಕ್ಷಣ ನೀತಿ ಹಿಂದೆ ತನ್ನ ಹಿಡನ್ ಅಜೆಂಡಾ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಶಿಕ್ಷಣ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಹೊರಟಿದೆ ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಆರೋಪಿಸಿದರು.
ಪತ್ರಿಕಾಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೆಂಥಿಲ್, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಶಿಕ್ಷಣ ನೀತಿ ಕಲುಷಿತಗೊಳಿಸುತ್ತಿದೆ. ಇದರ ಬಗ್ಗೆ ಚರ್ಚೆಯಾಗಬೇಕು. ನೂತನ ಶಿಕ್ಷಣ ನೀತಿ ಕೇಂದ್ರೀಕೃತವಾಗಿದ್ದು, ಸ್ಥಳೀಯವಾಗಿ ಪೂರಕವಾಗಿಲ್ಲ. ಶಿಕ್ಷಣ ನೀತಿ ಮುಂದಿನ ಪೀಳಿಗೆಗೆ ಪೂರಕವಾಗಿರುವಂತಾಗಬೇಕು ಎಂದು ಸಲಹೆ ನೀಡಿದರು.
ನಾವು ಅಭಿವೃದ್ಧಿಯಲ್ಲಿ ಹಿಂದೆ ಸಾಗುತ್ತಿದ್ದೇವೆ ಎಂದು ದೂರಿದ ಅವರು, ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನ, ಅರಾಜಕತೆ, ಆಡಳಿತ ವಿರೋಧಿ ನೀತಿಯನ್ನು ಎಲ್ಲರೂ ಖಂಡಿಸಬೇಕು. ಪ್ರಶ್ನೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಇದು ನಾಗರಿಕರ ಕರ್ತವ್ಯವೂ ಹೌದು ಎಂದು ಹೇಳಿದರು.
ನರಸಿಂಹಮೂರ್ತಿ ನನ್ನ ಸ್ನೇಹಿತ: ಜಿಲ್ಲೆಯಲ್ಲಿ ಈ ಹಿಂದೆ ನಡೆದ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಬಂಧನವಾಗಿರುವ ಗೌರಿ ಟ್ರಸ್ಟ್ನ ನರಸಿಂಹಮೂರ್ತಿ ನನ್ನ ಸ್ನೇಹಿತ. ಅನುಮಾನಾಸ್ಪದ ಮಾಹಿತಿ ಮೇಲೆ ಪೊಲೀಸರು ಬಂಧಿಸಿದ್ದಾರೆ. ಅವರು ತಪ್ಪು ಮಾಡಿಲ್ಲ. ಪೊಲೀಸರು ವಿಚಾರಣೆ ನಡೆಸಿ ಬಿಡುಗಡೆ ಮಾಡಲಿದ್ದಾರೆ ಎಂದರು.
ಅಷ್ಟೇ ಅಲ್ಲದೆ ನಾನು ನರಸಿಂಹಮೂರ್ತಿ ಅವರನ್ನು ಮಾತನಾಡಿಸಲು ಬಂದಿದ್ದು ನಿಜ. ಅವರು ಆರೋಪ ಮುಕ್ತರಾಗಿ ಬಿಡುಗಡೆಯಾಗಲಿದ್ದಾರೆ. ನಾನು ಜಿಲ್ಲಾಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದ್ದು ನನ್ನ ವೈಯಕ್ತಿಕ ವಿಚಾರ. ಕೇಂದ್ರದ ಆಡಳಿತವನ್ನು ಪ್ರಶ್ನಿಸಲು, ಟೀಕಿಸಲು ಹೊರ ಬಂದಿದ್ದೇನೆ. ಜನರೊಂದಿಗೆ ಇದ್ದು ಪ್ರಶ್ನಿಸುತ್ತೇನೆ. ಯಾವುದೇ ಸಂಘಟನೆ, ಪಕ್ಷ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.