ರಾಯಚೂರು: ಕಳೆದ ರಾತ್ರಿ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಭಾರಿ ಮಳೆಯಿಂದಾಗಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿವೆ. ಆದ್ರೆ ಅದೃಷ್ಟವಶಾತ್ ಅನಾಹುತ ತಪ್ಪಿದೆ. ನಗರದ ಸಿಯಾತಲಾಬ್ ಬಡವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿನ ನಿವಾಸಿಗಳು ನೀರನ್ನು ಹೊರಹಾಕಲು ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಜೀವ ಭಯದಿಂದ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.
ನಗರದ ಎನ್ಜಿಒ ಕಾಲೋನಿಯಲ್ಲಿನ ಶ್ರೀನೀಲಕಂಠೇಶ್ವರ ದೇವಾಲಯದ ಆವರಣದಲ್ಲಿದ್ದ ಅರ್ಚಕ ಶಂಕರಲಿಂಗ ಅವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಗೃಹ ಬಳಕೆಯ ವಸ್ತುಗಳು ಹಾಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ ರಂಗಮಂದಿರದ ಬಳಿಯ ಸಾರ್ವಜನಿಕ ಉದ್ಯಾನವನದಲ್ಲೂ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ.
ತಾಲೂಕಿನ ರಘುನಾಥನಹಳ್ಳಿ, ಹೋಸಪೇಟೆ-ಜೇಗರಕಲ್ ಗ್ರಾಮಕ್ಕೂ ನೀರು ನುಗ್ಗಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗ್ರಾಮದ ಹಳ್ಳದಿಂದ, ಪಕ್ಕದ ಜಮೀನಿಗಳಿಗೆ ನೀರು ನುಗ್ಗಿ ರೈತರ ಬೆಳೆಗಳು ನೀರುಪಾಲಾಗಿವೆ. ಜೊತೆಗೆ ಗ್ರಾಮಗಳಿಗೆ ಸಂಚರಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬೆಳಗ್ಗೆ ಹಳ್ಳಿಗಳಿಂದ ಪಟ್ಟಣಕ್ಕೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.