ರಾಯಚೂರು : ನಿನ್ನೆ ರಾತ್ರಿ ಗುಡುಗು-ಮಿಂಚು ಸಹಿತ ಸುರಿದ ಭಾರೀ ಮಳೆ ರಾಯಚೂರು ಜಿಲ್ಲೆಯಲ್ಲಿ ಜನರ ಜೀವನವನ್ನ ಅಸ್ತವ್ಯಸ್ತಗೊಳಿಸಿದೆ. ನಗರದ ಹೊರವಲಯದಲ್ಲಿರುವ ರಿಮ್ಸ್ ಆಸ್ಪತ್ರೆಯ ಆವರಣದ ಸುತ್ತಮುತ್ತಲು ಮಳೆ ನೀರು ನಿಂತಿದೆ. ರೋಗಿಗಳು ಮಳೆಯ ಕೊಳಚೆ ನೀರಿನಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ವಡಗಿರಿ ಗ್ರಾಮದ ರೋಗಿಯೊಬ್ಬ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ರೋಗಿಯನ್ನ ರಿಮ್ಸ್‌ನಿಂದ ಓಪೆಕ್‌ಗೆ ತೆರಳುವಂತೆ ವೈದ್ಯರು ಸೂಚಿಸಿದ್ದಾರೆ. ಶಸ್ತ್ರಚಿಕಿತ್ಸೆಗೊಳಾದ ರೋಗಿಗೆ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ವ್ಯವಸ್ಥೆ ಕಲ್ಪಿಸಬೇಕು.
ಆದ್ರೆ, ರೋಗಿಯ ಗೋಳನ್ನ ಯಾರೂ ಕೇಳದ ಪರಿಸ್ಥಿತಿಯಿಂದಾಗಿ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಆಸ್ಪತ್ರೆಯ ಆವರಣದಲ್ಲಿ ನಿಂತಿರುವ ನೀರಿನಲ್ಲಿ ಕುಟುಂಬಸ್ಥರ ಸಹಾಯದೊಂದಿಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.
ಮನೆಗಳಿಗೆ ನುಗ್ಗಿದ ನೀರು ಹೊರ ಹಾಕಲು ಹರಸಾಹಸ : ರಾಯಚೂರು ನಗರದ ಸಿಯಾತಲಾಬ್, ಜಲಾಲ್‌ನಗರದ ಬಡಾವಣೆಗಳಿಗೆ ಮಳೆ ನೀರು ನುಗ್ಗಿ ಜನ ಸಂಕಷ್ಟ ಅನುಭವಿಸುವಂತಾಗಿದೆ. ಬಡವಣೆಯಲ್ಲಿರುವ ಹಲವು ಮನೆಯೊಳಗೆ ನೀರು ನುಗ್ಗಿದ್ದು, ಕುಳಿತುಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ-ಧಾನ್ಯಗಳು, ಬಟ್ಟೆ ನೀರುಪಾಲಾಗಿವೆ. ಮನೆಯೊಳಗೆ ನುಗ್ಗಿರುವ ನೀರನ್ನ ಹೊರ ಹಾಕಲು ಜನ ಪರದಾಡುತ್ತಿದ್ದಾರೆ.
ನೀರು ನಿಲುಗಡೆಗೊಂಡಿರುವ ಬಡಾವಣೆಗಳಿಗೆ ಸ್ಥಳೀಯ ಶಾಸಕ ಡಾ.ಶಿವರಾಜ್ ಪಾಟೀಲ್ ಭೇಟಿ ನೀಡಿ ಜನರಿಗೆ ಧೈರ್ಯ ತುಂಬಿ, ಅಗತ್ಯ ಕ್ರಮ ಕೈಗೊಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ.
ಉಕ್ಕಿ ಹರಿಯುತ್ತಿರುವ ಹಳ್ಳದಲ್ಲಿ ಅಪಾಯದ ಸವಾರಿ! : ಮತ್ತೊಂದೆಡೆ ಉಕ್ಕಿ ಹರಿಯುತ್ತಿರುವ ಹಳ್ಳದ ನೀರಿನಲ್ಲಿ ಅಪಾಯದ ನಡುವೆಯೇ ವಾಹನಗಳು ಸಂಚರಿಸುತ್ತಿರುವ ದೃಶ್ಯ ಜೇಗರಕಲ್ ಗ್ರಾಮದಲ್ಲಿ ಕಂಡು ಬಂದಿದೆ. ರಸ್ತೆ ಮಧ್ಯೆ ಹಳ್ಳದ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯುತ್ತಿರುವುದರಿಂದ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಇದರ ನಡುವೆ ಆಟೋಗಳು, ಜೀಪುಗಳು, ಟಂಟಂ ವಾಹನಗಳು ಅಪಾಯ ಲೆಕ್ಕಿಸದೇ ಸಂಚಾರ ನಡೆಸುತ್ತಿವೆ.
ಜೇಗರಕಲ್ ಮಾರ್ಗವಾಗಿ ಅರಶಿಣಿಗಿ, ಮಲ್ಲಾಪುರ ಸೇರಿ ಹಲವು ಗ್ರಾಮಳಿಗೆ ತೆರಳುವ ಮಾರ್ಗ ಇದಾಗಿದೆ. ಇದರಿಂದ ಕೆಲಸಕ್ಕೆ ತೆರಳುವ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.
ಪ್ರತಿ ಭಾರಿ ಹೆಚ್ಚಿನ ಮಳೆಯಾದಾಗ ಹಳ್ಳಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬಂದು ಓಡಾಡುವುದಕ್ಕೆ ಕಷ್ಟವಾಗುತ್ತದೆ. ಹೀಗಾಗಿ, ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಅಂತಾರೆ ಸ್ಥಳೀಯರು.