ರಾಯಚೂರು : ನರೇಗಾ ಕೂಲಿ ಕೆಲಸಕ್ಕೆ ತೆರಳಿದ ಮಹಿಳೆಯೊಬ್ಬರಿಗೆ ಹೃದಯಾಘಾತ ಸಂಭವಿಸಿ, ಅಸ್ವಸ್ತಗೊಂಡಿರುವ ಘಟನೆ ನಡೆದಿದೆ. ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಪಾಮನಕಲ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಲ್ಕರಾಗಿ ಗ್ರಾಮದ ಕೆರೆ ಹೂಳೆತ್ತುವ ಕೆಲಸದ ಸಮಯದಲ್ಲಿ ಗಂಗಮ್ಮ ಕಾಡಪ್ಪ ಎನ್ನುವ ಕೂಲಿ ಕಾರ್ಮಿಕ ಮಹಿಳೆಗೆ ಹೃದಯಾಘಾತವಾಗಿ ಅಸ್ವಸ್ಥರಾಗಿರುವುದಾಗಿ ತಿಳಿದು ಬಂದಿದೆ.
ಕಳೆದ ಒಂದು ವಾರದಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಚಿಲ್ಕರಾಗಿ ಕೆರೆ ಹೂಳೆತ್ತುವ ಕೆಲಸಕ್ಕೆ ಹೋಗುತ್ತಿದ್ದ ಗಂಗಮ್ಮ ಎಂದಿನಂತೆ ಭಾನುವಾರ ಬೆಳಗ್ಗೆ ಕೂಡ ಕೆಲಸಕ್ಕೆ ಹೋಗಿದ್ದಾರೆ.ಈ ಸಂದರ್ಭದಲ್ಲಿ ತೀವ್ರ ಹೃದಯಾಘಾತವಾಗಿದೆ. ಕೂಡಲೇ ಕೆಲಸ ಮಾಡುತ್ತಿದ್ದ ಜೊತೆಗಾರರು ಗ್ರಾಮ ಪಂಚಾಯಿತಿ ಪಿಡಿಒ ಅಮರೇಶ ಕಾಳಾಪೂರ ಹಾಗೂ ಇಂಜಿನಿಯರ್ ಸೋಮಶೇಖರ್ ಅವರಿಗೆ ಕರೆ ಮಾಡಿ ತುರ್ತು ಚಿಕಿತ್ಸೆ ಕೊಡಿಸುವಂತೆ ವಿನಂತಿ ಮಾಡಿಕೊಂಡಿದ್ದಾರೆ.
ಆದರೆ, ಅಧಿಕಾರಿಗಳು ನಿರ್ಲಕ್ಷ್ಯದಿಂದ ಮಾತನಾಡಿರುವುದಾಗಿ ದೂರಲಾಗಿದೆ. ಅಸ್ವಸ್ಥಗೊಂಡ ಮಹಿಳೆಯನ್ನು ಸಹ ಕೆಲಸಗಾರರು 108 ಆ್ಯಂಬುಲೆನ್ಸ್ ವಾಹನಕ್ಕೆ ಕರೆ ಮಾಡಿ ಲಿಂಗಸುಗೂರು ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹೃದ್ರೋಗ ತಜ್ಞರ ಬಳಿ ಮಹಿಳೆ ತೆರಳಿರುವುದಾಗಿ ತಿಳಿದು ಬಂದಿದೆ .
ಇನ್ನು ಪಾಮನಕಲ್ಲೂರು ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆಯಿದೆ, ಆದರೆ ವೈದ್ಯರಿಲ್ಲದ ಕಾರಣ ಲಿಂಗಸೂಗೂರು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನೂರಾರು ಕೂಲಿ ಕಾರ್ಮಿಕರು ಕೆಲಸ ಮಾಡುವಾಗ ಕನಿಷ್ಠ ವ್ಯವಸ್ಥೆಯನ್ನು ಕಲ್ಪಿಸದಿರುವುದಕ್ಕೆ ಸ್ಥಳೀಯ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಓದಿ :'ನಮಾಮಿ ಗಂಗೆ'ಗೆ ಇದುವರೆಗೆ ಎಷ್ಟು ಕೋಟಿ ಖರ್ಚು ಮಾಡಲಾಗಿದೆ ಗೊತ್ತಾ?