ಲಿಂಗಸುಗೂರು(ರಾಯಚೂರು) : ತಾಲೂಕಿನ ಕೆಸರಟ್ಟಿ ಗ್ರಾಮದಲ್ಲಿ ರಾಜ್ಯಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ರಾಜನಗೌಡ, ಮನೆ ಮನೆಗೆ ತೆರಳಿ ಪಾಠ ಮಾಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೊರೊನಾ ಸೋಂಕು ಹರಡುವಿಕೆಯ ಭಯದಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಈ ನಡುವೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಶಾಲೆಗೆ ಬರಬೇಕೆಂದು ಸರ್ಕಾರ ಆದೇಶ ಮಾಡಿದ್ದರೂ ಬಹುತೇಕ ಶಿಕ್ಷಕರು ಗೈರಾಗಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಕೆಸರಟ್ಟಿ ಮುಖ್ಯ ಶಿಕ್ಷಕ ವಿಭಿನ್ನ ಶೈಲಿಯಲ್ಲಿ ಮಕ್ಕಳಿಗೆ ಕಲಿಸಲು ಮುಂದಾಗಿದ್ದು ಪ್ರಶಂಸನೀಯ.
ರಾಜನಗೌಡ ಅವರು ಸ್ವಂತ ಹಣದಲ್ಲಿ ಬ್ಲೂಟೂಥ್ ಆಧರಿತ ಮೈಕ್ ಸೆಟ್ ಖರೀದಿಸಿ ಮನೆ-ಮನೆ ಹಾಗೂ ಗಲ್ಲಿ-ಗಲ್ಲಿಗಳಿಗೆ ತೆರಳಿ ಮಕ್ಕಳನ್ನು ಒಟ್ಟುಗೂಡಿಸಿ, ಕೊರೊನಾ ಜಾಗೃತಿ ಮೂಡಿಸುವ ಜೊತೆಗೆ ತರಗತಿ ಪಠ್ಯಗಳನ್ನಾಧರಿಸಿ ಕಲಿಸುತ್ತಿದ್ದಾರೆ. ಜೊತೆಗೆ ಹೋಂ ವರ್ಕ್ ಹಾಕಿಕೊಟ್ಟು ಮೇಲಿಂದ ಮೇಲೆ ಪರಿಶೀಲನೆ ಮಾಡುತ್ತಿರುವುದು ಕಂಡು ಬಂದಿದೆ.
ಕೆಸರಟ್ಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 185ಕ್ಕೂ ಹೆಚ್ಚು ಮಕ್ಕಳಿದ್ದಾರೆ. ರಜೆಯ ಮಜಾ ಅನುಭವಿಸುತ್ತಿರುವ ಮಕ್ಕಳ ಕಲಿಕೆ ಕುಂಠಿತವಾಗಬಾರದೆಂದು ಸ್ವಯಂ ಪ್ರೇರಿತನಾಗಿ ಕಲಿಕೆಗೆ ಪ್ರೋತ್ಸಾಹ ನೀಡಲು ಮುಂದಾಗಿರುವೆ. ಈ ಪದ್ಧತಿಯ ಅನುಸರಣೆ ಮಕ್ಕಳಿಗೆ ಅನುಕೂಲವಾಗುವ ಜೊತೆಗೆ ನನಗೂ ಮಾನಸಿಕ ತೃಪ್ತಿ ತಂದಿದೆ ಎಂದು ಹೇಳುತ್ತಾರೆ ಮುಖ್ಯ ಶಿಕ್ಷಕ ರಾಜನಗೌಡ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಹೋಬಣ್ಣ ರಾಠೋಡ ಅವರನ್ನು ಸಂಪರ್ಕಿಸಿದಾಗ, ತಾಲೂಕಿನಲ್ಲಿ ಕೆಲ ಶಿಕ್ಷಕರು ಅಸಕ್ತಿ ವಹಿಸಿ ಕೊರೊನಾ ರಜೆಯಲ್ಲೂ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ ಕೆಸರಟ್ಟಿ ಮುಖ್ಯ ಶಿಕ್ಷಕ ರಾಜನಗೌಡ ಅವರು ವಿಶೇಷ ಕಾಳಜಿ ವಹಿಸಿ ಶಿಕ್ಷಣ ನೀಡುತ್ತಿರುವುದು ಶಿಕ್ಷಣ ಇಲಾಖೆ ಘನತೆ ಹೆಚ್ಚಿಸಿದೆ ಎಂದು ಬಣ್ಣಿಸಿದ್ದಾರೆ.