ಲಿಂಗಸುಗೂರು/ರಾಯಚೂರು: ಅನೇಕ ಗೊಂದಲಗಳ ಮಧ್ಯೆಯೇ ಅದ್ಧೂರಿಯಾಗಿ ಗುರುಗುಂಟಾ ಅಮರೇಶ್ವರ ದೇವಾಲಯದಲ್ಲಿ ಸಾಂಪ್ರದಾಯಿಕ ಮೂರನೇ ಉಚ್ಚಾಯ ಆಚರಣೆ ಜರುಗಿತು.
ಉತ್ತರ ಕರ್ನಾಟಕ ಭಾಗದ ರೈತರ ಜಾತ್ರೆ ಎಂದು ಕರೆಯಲ್ಪಡುವ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಗುರುಗುಂಟಾ ಅಮರೇಶ್ವರ ಜಾತ್ರೆಯನ್ನು ನಿಷೇಧಿಸಿ ದೇವಸ್ಥಾನ ಸಮಿತಿ ರಾತ್ರೋರಾತ್ರಿ ಆದೇಶ ಹೊರಡಿಸಿತ್ತು. ನಿಷೇಧ ಹೇರಿದ್ದನ್ನು ಲೆಕ್ಕಿಸದೆ ಸಹಸ್ರಾರು ಭಕ್ತರು ದೇವರಿಗೆ ಪೂಜೆ ಸಲ್ಲಿಸಿ, ಭಕ್ತಿ ಭಾವ ಮೆರೆದರು.
ವಾರದಿಂದ ಪಾದಯಾತ್ರೆ, ಉಪವಾಸ, ವೃತ ಆಚರಿಸಿ ಮಹಾ ರಥೋತ್ಸವದ ಮುನ್ನಾ ದಿನ ಶನಿವಾರ ರಾತ್ರಿಯೇ ವಿವಿಧ ಜಿಲ್ಲೆಗಳ ಸಹಸ್ರಾರು ಭಕ್ತರು ದೇವಸ್ಥಾನ ಆವರಣದಲ್ಲಿ ಬಿಡಾರ ಹೂಡಿದ್ದರು. ಆದರೆ ನಿಷೇಧ ಆದೇಶ ಹೊರಡಿಸಿರುವುದರಿಂದ ಭಕ್ತರನ್ನು ತೆರವುಗೊಳಿಸಲು ದೇವಾಲಯದ ಆಡಳಿತ ಮಂಡಳಿ ಮುಂದಾಯಿತು. ಆದರೆ ಜಾತ್ರೆ ಆರಂಭಕ್ಕೂ ಒಂದು ವಾರ ಮುಂಚೆಯೇ ಸ್ಪಷ್ಟ ನಿರ್ಣಯ ತೆಗೆದುಕೊಳ್ಳದಿರುವುದಕ್ಕೆ ಪೊಲೀಸ್, ಕಂದಾಯ ಇಲಾಖೆ ಹಾಗೂ ದೇವಸ್ಥಾನದ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ಭಕ್ತಿ ಭಾವ ಮೆರೆದರು.
ಇಂದು ಗುರುಗುಂಟಾ ಮತ್ತು ಗುಂತಗೋಳ ಸಂಸ್ಥಾನದಿಂದ ಕಳಸ, ಪಲ್ಲಕ್ಕಿ ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ 3 ನೇ ಉಚ್ಚಾಯ ಆಚರಣೆ ಸಹ ಯಾವುದೇ ಅಡಚಣೆ ಇಲ್ಲದೆ ಸಾಗಿತು.