ರಾಯಚೂರು: ಕಲ್ಯಾಣ ಕರ್ನಾಟಕ ಪ್ರದೇಶದ ಬಿಸಿಲು ನಾಡು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗೋಲಪಲ್ಲಿ ಬಳಿ ವರ್ಷದ 10 ತಿಂಗಳು ಮೈದುಂಬಿ ಪ್ರವಾಸಿಗರ ಕಣ್ಮನಸೆಳೆಯುವ ಗುಂಡಲಬಂಡಿ ಜಲಪಾತವಿದೆ.
ಬೀದರ್ ಶ್ರೀರಂಗಪಟ್ಟಣ ಮುಖ್ಯ ರಸ್ತೆ ಮೂಲಕ ಗುರುಗುಂಟದಿಂದ 3.ಕಿ.ಮೀ ಹಾಗೂ ತಿಂಥಣಿ ಬ್ರಿಡ್ಜ್ನಿಂದ ಗುರುಗುಂಟ ಕಡೆಗೆ 10ಕಿ.ಮೀ ಕ್ರಮಿಸಿ ಮುಖ್ಯರಸ್ತೆಯಿಂದ 1.5ಕಿ.ಮೀ ಸಂಪರ್ಕ ರಸ್ತೆ ಮೂಲಕ ನಡೆದು ಹೋದರೆ ರುದ್ರರಮಣೀಯ ಜಲಪಾತ ಸಿಗುತ್ತದೆ. 300 ಅಡಿ ಅಗಲ, 700 ಅಡಿ ಇಳಿಜಾರು ಬಂಡೆಯೊಂದಿಗೆ ಮೇಲ್ಭಾಗದಿಂದ ಕಲ್ಲು ಗುಂಡಿಗಳ ಮಧ್ಯೆ ನರ್ತಿಸುತ್ತ ಧುಮ್ಮಿಕ್ಕುವ ರುದ್ರ ರಮಣೀಯ ಚಿತ್ರಣ ಪ್ರೇಕ್ಷಕರನ್ನು ಮೂಕ ವಿಸ್ಮಿತರನ್ನಾಗಿಸುತ್ತದೆ. ರಾಜ್ಯದೆಲ್ಲೆಡೆ ಮಳೆಗಾಲದಲ್ಲಿ ಮಾತ್ರ ಬಹುತೇಕ ಜಲಪಾತಗಳ ವೀಕ್ಷಣೆ ಸಾಧ್ಯ. ಆದರೆ ಬಿಸಿಲು ನಾಡಿನ ಗುಂಡಲಬಂಡಿ ಜಲಪಾತವನ್ನು ಮಳೆಗಾಲದಲ್ಲಿ ಮಾತ್ರವಲ್ಲದೇ ವರ್ಷದ 10 ತಿಂಗಳು ಭೇಟಿ ನೀಡಿ ಕಣ್ಣು ತುಂಬಿಕೊಳ್ಳಬಹುದಾಗಿದೆ.
ಆದರೆ, ಹಬ್ಬ ಹರಿದಿನಗಳು, ರಜೆ ದಿನಗಳಲ್ಲಿ ತಂಡೋಪತಂಡವಾಗಿ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವತ್ತ ಆಡಳಿತ ವ್ಯವಸ್ಥೆ ಮುಂದಾಗಿಲ್ಲ. ಜಿಲ್ಲಾಡಳಿತ, ಸಚಿವರು, ಶಾಸಕರು ಇತರ ಜಲಪಾತ ಅಭಿವೃದ್ಧಿ ಪಡಿಸಿದಂತೆ ಈ ಜಲಪಾತ ಅಭಿವೃದ್ಧಿಗೆ ಮುಂದಾಗದಿರುವ ಬಗ್ಗೆ ವ್ಯಾಪಕ ಟೀಕೆ ಕೇಳಿ ಬರುತ್ತಿವೆ.
ಸಮಾಜ ಸೇವಕ ಅಕ್ರಂ ಪಾಷಾ ಈ ಟಿವಿ ಭಾರತ ಜೊತೆ ಮಾತನಾಡಿ, ವರ್ಷದ 10 ತಿಂಗಳು ವಿಶಾಲ ಬಂಡೆಯಿಂದ ರುದ್ರ ರಮಣೀಯವಾಗಿ ಹರಿವ ಈ ಜಲಪಾತ ವೀಕ್ಷಣೆಗೆ ಭಾರಿ ಜನಸ್ತೋಮವೇ ಬರುತ್ತದೆ. ಸರ್ಕಾರ ಈ ಪ್ರದೇಶ ಅಭಿವೃದ್ಧಿ ಪಡಿಸಿ, ಪ್ರವಾಸಿ ತಾಣ ಮಾಡಲು ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.