ರಾಯಚೂರು : ತಾಲೂಕಿನ ನಾಲ್ಕೈದು ಗ್ರಾಮ ಪಂಚಾಯತ್ ಚುನಾವಣೆ ಮೀಸಲಾತಿಯನ್ನ ಬದಲಾವಣೆ ಮಾಡುವ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮುದಾಯಕ್ಕೆ ರಾಯಚೂರು ಜಿಲ್ಲಾಧಿಕಾರಿಗಳು ಅನ್ಯಾಯವೆಸಗಿದ್ದಾರೆ ಎಂದು ಎಸ್ ನರಸಿಂಹಲು ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಒತ್ತಡಕ್ಕೆ ಮಣಿದು, ಪರಿಶಿಷ್ಟ ಪಂಗಡ/ಜಾತಿಗೆ ಮೀಸಲು ಆಗಿದ್ದ ಗ್ರಾಮ ಪಂಚಾಯತ್ ವಾರ್ಡ್‌ಗಳನ್ನ ಸಾಮಾನ್ಯ ವರ್ಗಕ್ಕೆ ಬದಲಾವಣೆಗೊಳಿಸಿದ್ದಾರೆ. ಇದರಿಂದ ಅನ್ಯಾಯಕ್ಕೆ ಒಳಗಾಗುವ ಪರಿಶಿಷ್ಟ ಪಂಗಡ, ಜಾತಿ ಸಮುದಾಯದಿಂದ ಕಲಬುರಗಿ ಹೈಕೋರ್ಟ್ ಮೋರೆ ಹೋಗುವ ಮೂಲಕ ಮೀಸಲಾತಿ ಬದಲಾವಣೆ ಮಾಡುವಂತೆ ಆದೇಶ ಹೊರಡಿಸಿದ್ರು.
ಜಿಲ್ಲಾಧಿಕಾರಿಗಳು ಮೀಸಲಾತಿಯನ್ನ ಮೊದಲ ನೋಟಿಫೀಕೇಷನ್ ಅನುಸಾರ ಮಾಡದೆ, ಬದಲಾವಣೆ ಮಾಡುವ ಮೂಲಕ 2ನೇ ನೋಟಿಫಿಕೇಷನ್ ಹೊರಡಿಸಿದ್ದಾರೆ. ಅಲ್ಲದೇ ಹೈಕೋರ್ಟ್ ಆದೇಶವನ್ನ ಸಹ ಪಾಲಿಸಿದೆ ನ್ಯಾಯಾಂಗ ಆದೇಶವನ್ನ ಉಲ್ಲಂಘನೆ ಮಾಡಿದ್ದಾರೆ ಎಂದು ದೂರಿದರು.
ಈ ಮೊದಲು ಹೊರಡಿಸಲಾದ ಅಧಿಸೂಚನೆಯಲ್ಲಿ ಬಾಯಿದೊಡ್ಡಿ ಗ್ರಾ.ಪಂ. 1ವಾರ್ಡ್‌ನ ಮೀಸಲಾತಿಯನ್ನು ಎಸ್ಟಿಗೆ, 2ನೇ ವಾಡ್‌ನ ಮೀಸಲಾತಿಯನ್ನು ಎಸ್ಸಿ ಮಹಿಳೆಗೆ ಮೀಸಲಿಡಲಾಗಿತ್ತು. ಅದನ್ನು ಬದಲಾಯಿಸಿ 1ನೇ ವಾರ್ಡ್ ಮೀಸಲಾತಿಯನ್ನು ಸಾಮಾನ್ಯ ಹಾಗೂ 2ನೇ ವಾರ್ಡ್‌ನ ಮೀಸಲಾತಿಯನ್ನು ಎಸ್ಟಿಗೆ ಮೀಸಲಿಡಲಾಗಿದೆ.
ಓದಿ: ಹೊಸ ಸಂಸತ್ತಿನ ಶಂಕು ಸ್ಥಾಪನೆಗೆ ಕ್ಷಣಗಣನೆ: ಹೀಗಿವೆ ನೂತನ ಭವನದ ವಿಶೇಷತೆಗಳು
ಬೀಜನಗೇರಾ ಗ್ರಾ.ಪಂ. ವ್ಯಾಪ್ತಿಯ ಸಿದ್ದರಾಮಪುರ ಮೀಸಲಾತಿಯನ್ನು ಹಿಂದೆ ಎಸ್ಸಿಗೆ ಮೀಸಲಾಗಿತ್ತು. ಅದನ್ನು ಸಾಮಾನ್ಯಕ್ಕೆ ಹಾಗೂ ಉಂಡ್ರಾಳದೊಡ್ಡಿ ಮೀಸಲಾತಿಯನ್ನು ಎಸ್ಸಿಯಿಂದ ಎಸ್ಟಿಗೆ ಬದಲಾಯಿಸಲಾಗಿದೆ. ಆತ್ಕೂರು ಗ್ರಾ.ಪಂ.ನ ಎಸ್ಸಿಗೆ ಮೀಸಲಿದ್ದ 2 ಸ್ಥಾನಗಳನ್ನು ಸಾಮಾನ್ಯಕ್ಕೆ ಬದಲಾಯಿಸಲಾಗಿದೆ.
ಶಾಖವಾದಿ ಗ್ರಾ.ಪಂ. ವ್ಯಾಪ್ತಿಯ ಪಲ್ಕದೊಡ್ಡಿ ಗ್ರಾಮ 2 ಸ್ಥಾನಗಳು ಎಸ್ಸಿ ಮತ್ತು ಎಸ್ಟಿಗೆ ಮೀಸಲಾಗಿತ್ತು. ಆದರೆ ಅದನ್ನು ಸಾಮಾನ್ಯ ಹಾಗೂ ಎಸ್ಟಿ ಮಹಿಳೆಗೆ ಬದಲಾವಣೆ ಮಾಡಲಾಗಿದೆ. ಹಲವು ವರ್ಷಗಳ ನಂತರ ಪರಿಶಿಷ್ಟರಿಗೆ ಮೀಸಲಿದ್ದ ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ ಬದಲಾವಣೆ ಮಾಡಿ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.