ರಾಯಚೂರು: ರಾಜ್ಯದಲ್ಲಿ ಮುಂಗಾರು ಆರಂಭವಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ. ಇಂತಹ ಸಮಯದಲ್ಲಿ ರೈತರಿಗೆ ಹಣದ ಅವಶ್ಯಕತೆ ಇರುತ್ತದೆ. ಹೀಗಾಗಿ ಹಿಂಗಾರು ಬೆಳೆಯಿಂದ ಆದಾಯದಲ್ಲಿ, ಮುಂಗಾರು ಬಿತ್ತನೆಗೆ ವಿನಿಯೋಗಿಸುತ್ತಾರೆ. ಆದರೆ 2020-2021ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಕಡಲೆ, ತೊಗರಿ ಬೆಳೆಯ ಹಣವನ್ನು ಇನ್ನೂ ಸರ್ಕಾರ ಪಾವತಿಸಿಲ್ಲ.
ಸರ್ಕಾರ ತೊಗರಿ, ಕಡಲೆ ಖರೀದಿ ಕೇಂದ್ರವನ್ನು ಆರಂಭಿಸುವುದಾಗಿ ಘೋಷಿಸಿತ್ತು. ಈ ವೇಳೆ ರಾಯಚೂರು ಜಿಲ್ಲೆಯೊಂದರಲ್ಲಿ ತೊಗರಿ ಮಾರಾಟಕ್ಕೆ 23,235 ರೈತರು, ಕಡಲೆ ಮಾರಾಟಕ್ಕೆ 6,700 ರೈತರು ನೋಂದಣಿ ಮಾಡಿಸಿದ್ದರು. ತೊಗರಿ ಮಾರಾಟಕ್ಕೆ ನೋಂದಾಯಿಸಿದ 23,235 ರೈತರ ಪೈಕಿ, 22,945 ರೈತರು ಖರೀದಿ ಕೇಂದ್ರಗಳಲ್ಲಿ 2,09,000 ಕ್ವಿಂಟಾಲ್ ಖರೀದಿಸಲಾಯಿತು.
ಕಡಲೆ ಮಾರಾಟ ಮಾಡಲು ನೋಂದಾಯಿಸಿದ 6,700 ರೈತರ ಪೈಕಿ, 6,190 ರೈತರು ಖರೀದಿ ಕೇಂದ್ರದಲ್ಲಿ ಕಡಲೆ ಮಾರಾಟ ಮಾಡಿದ್ದು, 99,945 ಕ್ವಿಂಟಾಲ್ ಖರೀದಿ ಮಾಡಲಾಯಿತು.
ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಕ್ವಿಂಟಾಲ್ಗೆ 6,100 ರೂಪಾಯಿ, ಕಡಲೆ ಕ್ವಿಂಟಾಲ್ಗೆ 4,875 ರೂಪಾಯಿ ನಿಗದಿ ಮಾಡಿತ್ತು. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ತೊಗರಿ ಮಾರಾಟ ಮಾಡಿದ ಎಲ್ಲ ರೈತರಿಗೆ ಹಣವನ್ನು ಪಾವತಿ ಮಾಡಬೇಕಾಗಿತ್ತು.
ತೊಗರಿ ಮಾರಾಟ ಮಾಡಿದ 22,945 ರೈತರ ಪೈಕಿ, 21,945 ರೈತರಿಗೆ ಮಾತ್ರ ಹಣ ಪಾವತಿ ಮಾಡಿದ್ರೆ, ಇನ್ನುಳಿದ 1,000 ರೈತರಿಗೆ ಪಾವತಿಸಿಲ್ಲ. ಇತ್ತ ಕಡಲೆ ಮಾರಾಟ ಮಾಡಿದ 6,190 ರೈತರ ಪೈಕಿ 3,725 ರೈತರಿಗೆ ಹಣವನ್ನ ಪಾವತಿ ಮಾಡಿದ್ದು, ಇನ್ನುಳಿದ 2,465 ರೈತರಿಗೆ ಹಣ ಪಾವತಿಸಿಲ್ಲ.
ಇದರಿಂದ ರೈತರಿಗೆ ಬೆಳೆ ಮಾರಾಟ ಮಾಡಿದ್ದರೂ, ಕೈಗೆ ಹಣ ಸಿಗದಂತೆ ಆಗಿದೆ. ಒಟ್ನಲ್ಲಿ, ರೈತ ಪರ ಎಂದು ಬಿಗುವ ಸರ್ಕಾರಗಳು ರೈತರಿಗೆ ಸಕಾಲಕ್ಕೆ ಹಣ ಪಾವತಿಸುತ್ತಿಲ್ಲ. ನಾವು ರೈತರ ಪರವೆಂದು ಹೇಳುವ ವಿಪಕ್ಷಗಳು ಸಹ, ಸರ್ಕಾರದ ಮೇಲೆ ಒತ್ತಡ ಹೇರಿ ಹಣ ಪಾವತಿಸುವಂತೆ ಕೇಳುತ್ತಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾನೆ.