ರಾಯಚೂರು : ಕುರುಬ ಸಮಾಜಕ್ಕೆ ರಾಜ್ಯ ಸರ್ಕಾರ ಎಸ್ಟಿ ಮಿಸಲಾತಿ ನೀಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಹೋರಾಟವನ್ನು ರಾಜಕೀಯ ಮಾಡುತ್ತಿರುವುದಕ್ಕೆ ನನ್ನ ವಿರೋಧವಿದೆ. ನಾನು ಕುರುಬ ಸಮಾಜದ ವಿರೋಧಿ ಎಂದು ಬಿಂಬಿಸಲು ಹೊರಟಿದ್ದಾರೆ. ಅದು ಯಶಸ್ವಿಯಾಗದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಾಗಿನೆಲೆ ಗುರು ಪೀಠದ ತಿಂಥಣಿ ಬ್ರಿಡ್ಜ್ನಲ್ಲಿ ಆಯೋಜಿಸಿದ್ದ ಹಾಲುಮತ ಸಂಸ್ಕೃತಿ ವೈಭವ 2021 ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬರಿಗೆ ಎಸ್ಟಿ ಮೀಸಲಾತಿ ನೀಡುವುದಕ್ಕೆ ನಾನು ವಿರೋಧಿಸುವುದಿಲ್ಲ.
ನಾನು ಹೋರಾಟವನ್ನು ಬೆಂಬಲಿಸುವೆ. ಆದರೆ, ಮೀಸಲಾತಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದು, ಇದರ ಹಿಂದೆ ಆರ್ಎಸ್ಎಸ್ ಕಾರ್ಯ ನಿರ್ವಹಿಸುತ್ತಿರುವುದಕ್ಕೆ ವಿರೋಧವಿದೆ ಎಂದರು. ಬಿಜೆಪಿ ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಅವರ ಸರ್ಕಾರವಿದ್ದಾಗಿಯೂ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವುದು ಯಾರ ವಿರುದ್ಧ ಎಂಬುದು ಸ್ಪಷ್ಟವಾಗಿಲ್ಲ. ಮೀಸಲಾತಿ ವಿಚಾರದಲ್ಲಿ ರಾಜಕೀಯವಿಲ್ಲದಿದ್ದರೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಒತ್ತಡ ಹೇರಿ ಏಕೆ ಕೊಡಿಸಬಾರದು ಎಂದು ಪ್ರಶ್ನಿಸಿದರು.
ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾಲ್ಕು ಜಿಲ್ಲೆಗಳಲ್ಲಿನ ಕುರುಬ ಸಮಾಜದವರಿಗೆ ಮೀಸಲಾತಿ ಕಲ್ಪಸಿದ್ದೆ. ಕುಲಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿ ವರ್ಷಗಳೇ ಕಳೆದಿದ್ದರೂ ಈವರೆಗೂ ಪೂರ್ಣಗೊಂಡಿಲ್ಲ. ಎಸ್ಟಿ ಮೀಸಲಾತಿ ಹೋರಾಟದ ಹೆಸರಿನಲ್ಲಿ ಕುರುಬ ಸಮಾಜವನ್ನು ಒಡೆಯುವ ಹುನ್ನಾರ ಮಾಡಲಾಗುತ್ತಿದೆ. ನಾನು ಸಮಾಜದ ವಿರೋಧಿ ನಾಯಕ ಎಂದು ಬಿಂಬಿಸಲು ಹೊರಟಿದ್ದಾರೆ, ಅದು ಯಶಸ್ವಿಯಾಗುವುದಿಲ್ಲ ಎಂದರು.