ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ವ್ಯಕ್ತಿಯೋರ್ವ ಬೆನಿಫಿಟ್ ಸ್ಕೀಮ್ ಎಂಬ ಯೋಜನೆಯಿಂದ ಲಾಭ ಇದೆ ಎಂದು ನಂಬಿಸಿ ತನ್ನ ಸ್ನೇಹಿತರನ್ನು ವಂಚಿಸಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2018 ಜುಲೈ 7 ರಂದು ಬೆನಿಫಿಟ್ ಸ್ಕಿಂನಲ್ಲಿ ಪ್ರತಿ ದಿನ ರೂ. 100 ರಂತೆ ಪಾವತಿಸಬೇಕು. ಡ್ರಾದಲ್ಲಿ ಲಕ್ಕಿ ವಿನ್ನರ್ಗೆ ಮೋಟರ್ ಬೈಕ್, ಇಲ್ಲವೆ ಸ್ಕಿಂ ಮುಗಿದಾಕ್ಷಣ ಎಲ್ಲ ಸದಸ್ಯರಿಗೆ ರೂ. 60 ಸಾವಿರದ ಬೈಕ್ ನೀಡುವುದಾಗಿ ಸೈಯದ್ ಸಲಿಂ ಭರವಸೆ ನೀಡಿದ್ದ ಎನ್ನಲಾಗಿದೆ.
ಇನ್ನು ಈ ಬೆನಿಫಿಟ್ ಸ್ಕೀಮ್ನಲ್ಲಿ ಲಿಂಗಸುಗೂರು ಪಟ್ಟಣದ 65 ಸದಸ್ಯರು ಸೇರಿ 299 ಜನ ಸದಸ್ಯತ್ವ ಪಡೆದಿದ್ದರು. ಲಿಂಗಸುಗೂರಿನ 64 ಜನ ಸದಸ್ಯರು ಡ್ರಾ ಮಾಡದೆ, ಮೋಟರ್ಬೈಕ್ ಕೊಡುವಂತೆ ಕೇಳಲು ಹೋದವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಜರುಗಿದೆ.
ಇಮ್ರಾನ್ಖಾನ್ ಎಂಬುವವರು ನೀಡಿದ ದೂರಿನ ಮೇಲೆ ಸೈಯದ್ ಸಲೀಂ, ತಸ್ಲಿಂ, ಆಜಿಂ ಸಮೀರಾಕಬರ, ಯುಸೂಫ್, ನೂರಜಾನಬೇಗಂ, ನಸ್ರೀಂಭಾನು, ಅಮಿರುನ್ನಿಸಾಬೇಗಂ ಎಂಬ ಎಂಟು ಜನರ ವಿರುದ್ಧ ಸದ್ಯ ರೂ.39 ಲಕ್ಷ ರೂ. ವಂಚನೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.