ರಾಯಚೂರು : ನಕಲಿ ಕೀಲಿ ಬಳಸಿ ಲಕ್ಷಾಂತರ ಕದ್ದು ಪರಾರಿಯಾಗಿದ್ದ ಪ್ರಕರಣವನ್ನು ಸಿಂಧನೂರು ವಿಭಾಗದ ಪೊಲೀಸರು 48 ಗಂಟೆಯಲ್ಲಿ ಭೇದಿಸಿದ್ದಾರೆ. ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಾಹನ ಚಾಲಕ ಸೈಯದ್ ಜುಬೇರ್, ಈತನ ಸಹೋದರ ಖಲಿಂದರ್ ಹಾಗೂ ಸ್ನೇಹಿತ ಗಣೇಶ ಬಂಧಿತ ಆರೋಪಿಗಳು.
ಆಗಸ್ಟ್ 18ರಂದು ಸಿಂಧನೂರು ಪಟ್ಟಣದ ಕನಕದಾಸ ವೃತ್ತದ ಬಳಿ ಟಾಟಾ ಟರ್ಪೋ ವಾಹನದಲ್ಲಿ 45 ಲಕ್ಷ 23 ಸಾವಿರದ 260 ರೂಪಾಯಿ ನಗದು ಹಣವನ್ನು ದೋಚಿದ ಬಗ್ಗೆ ಪ್ರಕರಣ ದಾಖಲಾಗಿತ್ತು. ಗಣೇಶ ಬೀಡಿ ಡಿಸ್ಟ್ರಿಬ್ಯುಟರ್ಗೆ ಎಂಬುವವರಿಗೆ ಸೇರಿದ ಹಣ ಇದಾಗಿತ್ತು.
ಗಣೇಶ ಬೀಡಿ ಡಿಸ್ಟ್ರಿಬ್ಯುಟರ್ನ ಡ್ರೈವರ್ ಹಾಗೂ ಸೇಲ್ಸ್‌ಮನ್ ಆಗಿದ್ದ ಸೈಯದ್ ಜುಬೇರ್ ನಿತ್ಯ ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಹಂಚಿಕೆ ಮಾಡಿ, ಹಣವನ್ನು ತರುತ್ತಾನೆ. ಆದರೆ ಲಕ್ಷಾಂತರ ರೂಪಾಯಿ ಜಮಾವಾಗುತ್ತಿರುವುದು ಮನಗಂಡು ಅನ್ನ ಹಾಕಿದ ಮನೆಗೆ ಕನ್ನ ಹಾಕುವ ಸಂಚನ್ನು ಆತನ ಸಹೋದರ ಹಾಗೂ ಸ್ನೇಹಿತನೊಂದಿಗೆ ಸೇರಿ ಮಾಡುತ್ತಾನೆ.
ಕಳ್ಳತನದ ಆರೋಪ ತನ್ನ ಮೇಲೆ ಬಾರದಂತೆ ಮಾಡಲು ಊಟಕ್ಕೆ ಹೋದಾಗ ಹಣವನ್ನು ಕಾರಿನಲ್ಲೇ ಬಿಟ್ಟು ಹೋಗಿ ನಂತರ ಸೈಯದ್ ಜುಬೇರ್ನೇ ತಮ್ಮ ಮತ್ತು ಸ್ನೇಹಿತನನ್ನು ಸೇರಿಸಿಕೊಂಡು ಹಣ ದೋಚಿದ್ದಾರೆ. ಇದಕ್ಕೂ ಮೊದಲು ಕಾರಿನ ನಕಲಿ ಕೀಯನ್ನು ಮಾಡಿಸಿ ಈ ಸಂಚು ರೂಪಿಸಿದ್ದರು. ಪ್ರಕರಣ ದಾಖಲಾದ ಕೂಡಲೇ 4 ತಂಡಗಳನ್ನು ರಚಿಸಿ ಕಾರ್ಯಪ್ರವೃತ್ತರಾದ ಪೊಲೀಸರು 48ಗಂಟೆಯಲ್ಲಿ ಪ್ರಕರಣವನ್ನು ಭೇದಿಸಿದ್ದಾರೆ.
ಇದನ್ನೂ ಓದಿ : ದರೋಡೆ ಮಾಡಲು ಹೊಂಚು ಹಾಕಿ ನಿಂತಿದ್ದವರು ಪೊಲೀಸರ ಅತಿಥಿಯಾದ್ರು