ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ರೈತ ಜೀವನಾಡಿಯಾದ ನಂದನಾಡಗಿ ಹನಿ ನೀರಾವರಿ ಯೋಜನೆಯ ವ್ಯಾಪ್ತಿಯಿಂದ ಬಿಟ್ಟು ಹೋಗಿರುವ ಗ್ರಾಮಗಳ ಸೇರ್ಪಡೆಗೆ ಮಾಜಿ ಶಾಸಕ ಮಾನಪ್ಪ ವಜ್ಜಲ ಮನವಿ ಮಾಡಿದರು.
ಮಂಗಳವಾರ ಬಸವಸಾಗರ(ನಾರಾಯಣಪುರ) ಅಣೆಕಟ್ಟೆಗೆ ಭೇಟಿ ನೀಡಿದ್ದ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದ ಅವರು, ಯೋಜನೆ ರೂಪಿಸುವಾಗ ಕ್ಷೇತ್ರದ ಬಹುತೇಕ ಅಕ್ಕ ಪಕ್ಕದ ಗ್ರಾಮಗಳು ಸೇರ್ಪಡೆ ಆಗದೆ ವಂಚಿತಗೊಂಡಿವೆ ಎಂದರು.
ಕ್ಷೇತ್ರದ ಬನ್ನಿಗೋಳ, ಜಾಂತಾಪುರ, ಯರದಿಹಾಳ, ಕನಸಾವಿ, ಬ್ಯಾಲಿಹಾಳ, ಹುನೂರು, ತುರಡಗಿ ಸೇರಿದಂತೆ ಬಹುತೇಕ ಗ್ರಾಮಗಳ ರೈತರಿಗೆ ವಂಚನೆಯಾಗಿದೆ. ಈ ಹಿನ್ನಲೆ ನೀರಾವರಿ ವಂಚಿತ ರೈತರಿಗೆ ನ್ಯಾಯ ಒದಗಿಸಿ ಅವರ ಜಮೀನಿಗೆ ನೀರು ಹರಿಸಬೇಕು ಎಂದು ಕೋರಿದರು.
ಇನ್ನೂ ಈ ವಿಚಾರಕ್ಕೆ ಸ್ಪಂದಿಸಿದ ಸಚಿವ ರಮೇಶ ಜಾರಕಿಹೊಳಿ ಅವರು, ಕೊರೊನಾ ಸಮಸ್ಯೆ ಬಗೆಹರಿದು ಲಾಕ್ ಡೌನ್ ಸಂಪೂರ್ಣ ಸಡಿಲವಾದ ನಂತರ ವಿಶೇಷ ಸಭೆ ಕರೆದು ಚರ್ಚಿಸೋಣ ಎಂದರು. ಜೊತೆಗೆ ಅಧಿಕಾರಿಗಳು ಮಾಜಿ ಶಾಸಕರ ಮನವಿ ಗಂಭೀರವಾಗಿ ಪರಿಗಣಿಸಿ ಪೂರ್ವಾಪರ ಮಾಹಿತಿ ಸಂಗ್ರಹಿಸುವಂತೆ ಈ ವೇಳೆ ಸೂಚಿಸಿದರು.