ರಾಯಚೂರು: ಕೃಷ್ಣಾ ಭೀಮಾ ನದಿ ಸಂಗಮ ಪ್ರದೇಶವಾದ ತಾಲೂಕಿನ ಗುರುರ್ಜಾಪುರ ಪ್ರವಾಹಕ್ಕೆ ಒಳಗಾಗಲಿದೆ ಎಂದು ಜನರ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದ್ದರು, ಗ್ರಾಮಸ್ಥರು ಮಾತ್ರ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದು ಸ್ಥಳಾಂತರ ಕಾರ್ಯಕ್ಕೆ ಹಿನ್ನಡೆಯಾಗಿದೆ.
ಕೃಷ್ಣಾ ಭೀಮಾ ನದಿಯಲ್ಲಿ ಲಕ್ಷಾಂತರ ಕ್ಯೂಸೆಕ್ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವ ಹಿನ್ನೆಲೆ ತಾಲೂಕಿನ ಗುರುರ್ಜಾಪುರ ಹತ್ತಿರ ಸಂಗಮ ಪ್ರದೇಶದಲ್ಲಿ ನೀರಿನ ಮಟ್ಟ ಹೆಚ್ಚಳವಾಗಿ ಗ್ರಾಮದ ಜನವಸತಿ ಪ್ರದೇಗಳಿಗೆ ಹಾನಿ ಸಂಭವಿಸುವ ಆತಂಕವಿದೆ. ಆದ್ದರಿಂದ ಮುಜಾಗೃತ ಕ್ರಮವಾಗಿ ಜಿಲ್ಲಾಡಳಿತ ಗ್ರಾಮದ ಜನರ ಸ್ಥಳಾಂತರಕ್ಕೆ 13 ಕ್ಕೂ ಅಧಿಕ ಸಾರಿಗೆ ಬಸ್ ವ್ಯವಸ್ಥೆ ಮಾಡಿತ್ತು. ಆದರೆ ಗ್ರಾಮದ ಜನರು ಮಾತ್ರ ಪ್ರವಾಹ ಪರಿಸ್ಥಿತಿ ನೋಡಿ, ಗ್ರಾಮದಲ್ಲಿ ನೀರು ಬಂದರೆ ಮಾತ್ರ ಸ್ಥಳಾಂತರಗೊಳ್ಳಲು ತೀರ್ಮಾನಿಸಿದ ಹಿನ್ನೆಲೆ ಬಸ್ಗಳು ಖಾಲಿಯಾಗಿ ಗ್ರಾಮದಲ್ಲಿ ನಿಂತಿವೆ.
ಜಿಲ್ಲಾಡಳಿತ ಪ್ರಕಾರ ಭೀಮಾ ನದಿಯಲ್ಲಿ 8 ಲಕ್ಷ ಕ್ಯೂಸೆಕ್, ಕೃಷ್ಣಾ ನದಿಯ ನಾರಾಯಣಪುರ ಜಲಾಶಯದಿಂದ 1.80 ಲಕ್ಷ ಕ್ಯೂಸೆಕ್ ಒಟ್ಟು ಸುಮಾರು 10 ಲಕ್ಷ ಕ್ಯೂಸೆಕ್ ನೀರು ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಜನರ ಸುರಕ್ಷತಾ ದೃಷ್ಟಿಯಿಂದ ಸ್ಥಳಾಂತರಕ್ಕೆ ಮುಂದಾಗಿದೆ. ಗ್ರಾಮಸ್ಥರ ಪ್ರಕಾರ ಊರು ಎತ್ತರ ಪ್ರದೇಶದಲ್ಲಿ ಇದ್ದು ಇಲ್ಲಿಯವರೆಗೂ ನೀರು ಬರುವುದು ಅನುಮಾನ. ನೀರು ಬಂದ ನಂತರವೇ ಸ್ಥಳಾಂತರಗೊಳುವುದಾಗಿ ಹೇಳುತ್ತಿದ್ದು, ಅಧಿಕಾರಿಗಳು ಗ್ರಾಮಸ್ಥರ ಮನವಲಿಕೆಗೆ ಮುಂದಾಗಿದ್ದಾರೆ.
ಸಾರಿಗೆ ಸಿಬ್ಬಂದಿ ವೀರುಪಾಕ್ಷೀ ಮಾತನಾಡಿ, ಮೇಲಿನ ಅಧಿಕಾರಿಗಳ ಸೂಚನೆ ಮೇರೆಗೆ ಗುರುರ್ಜಾಪುರ ಗ್ರಾಮಕ್ಕೆ 13 ಬಸ್ಗಳೊಂದಿಗೆ ಬಂದಿದ್ದು, ಕೃಷ್ಣಾ ಭೀಮಾ ನದಿ ಸಂಗಮ ಪ್ರದೇಶವಾಗಿರುವುದರಿಂದ ಪ್ರವಾಹದ ಹಿನ್ನೆಲೆ ಜನರನ್ನು ಸ್ಥಳಾಂತರಿಸಲು ಆಗಮಿಸಿದ್ದೆವು. ಆದರೆ ಗ್ರಾಮಸ್ಥರು ಸ್ಥಳಾಂತರಕ್ಕೆ ಹಿಂದೇಟು ಹಾಕುತ್ತಿದ್ದು, ಅಧಿಕಾರಿಗಳ ಆದೇಶ ಬರುವರೆಗೂ ಇಲ್ಲೆ ಇರುವುದಾಗಿ ಹೇಳಿದರು.
ಗ್ರಾಮಸ್ಥ ಮಲ್ಲಯ್ಯ ಮಾತನಾಡಿ, ಪ್ರತಿ ವರ್ಷ ನಮ್ಮಲ್ಲಿ ಪ್ರವಾಹದಲ್ಲಿ ಜನವಸತಿ ಪ್ರದೇಶದಲ್ಲಿ ನೀರು ನುಗ್ಗಿ ಹಾನಿ ಸಂಭವಿಸುತ್ತದೆ. ಕಳೆದ ಸಲ ನಮ್ಮ ಸ್ಥಳಾಂತರ ಸಮಯದಲ್ಲಿ ಜಾನುವಾರುಗಳನ್ನು ಇಲ್ಲೆ ಬಿಟ್ಟಿದ್ದರಿಂದ ಹಾವು ಚೇಳು ಕಡಿದು ಸಾವನ್ನಪ್ಪಿವೆ. ಹಾಗಾಗಿ ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದು, ನೀರಿನ ಮಟ್ಟ ಹೆಚ್ಚಾದರೆ ಮಾತ್ರ ಸ್ಥಳಾಂತರಗೊಳ್ಳುತ್ತೇವೆ ಎಂದರು.