ಲಿಂಗಸುಗೂರು: ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದ್ದು, ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ.
ಆಲಮಟ್ಟಿ, ಘಟಪ್ರಭ, ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಬಿದ್ದಿದ್ದರಿಂದ ನಾರಾಯಣಪುರ ಅಣೆಕಟ್ಟೆಗೆ 1.70 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿರುವ ಕಾರಣ ನಾರಾಯಣಪುರ ಅಣೆಕಟ್ಟೆಯ 22 ಕ್ರಸ್ಟ್ ಗೇಟ್ಗಳ ಮೂಲಕ ಕೃಷ್ಣಾ ನದಿಗೆ ಹೆಚ್ಚುವರಿ ನೀರು ಹರಿಬಿಡಲಾಗಿದೆ.
ನಾರಾಯಣಪುರ ಅಣೆಕಟ್ಟೆ ನೀರಿನ ಸಾಮರ್ಥ್ಯ 491.252 ಮೀಟರ್ ಇದ್ದು, ಈ ಪೈಕಿ 491.490 ಮೀಟರ್ ಮಟ್ಟ ಕಾಯ್ದುಕೊಂಡು 1,80,300 ಕ್ಯೂಸೆಕ್ ನೀರು ಕ್ರಸ್ಟೆ ಗೇಟ್ ಮೂಲಕ ನದಿಗೆ ಬಿಡಲಾಗಿದೆ. ನದಿ ಪಾತ್ರದ ಜನತೆ, ಜಾನುವಾರುಗಳ ಸುರಕ್ಷತೆಗೆ ಈಗಾಗಲೇ ಆಯಾ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದು ಅಣೆಕಟ್ಟೆ ವಿಭಾಗದ ಸಹಾಯಕ ಎಂಜಿನಿಯರ್ ವಿಜಯಕುಮಾರ ಅರಳಿ ತಿಳಿಸಿದ್ದಾರೆ.
ನದಿ ಪಾತ್ರದ ರಾಯಚೂರು, ಯಾದಗಿರಿ ಜಿಲ್ಲೆಯ ನಡುಗಡ್ಡೆ ಜನತೆ ಬಹುತೇಕವಾಗಿ ಬಾಹ್ಯ ಸಂಪರ್ಕ ಕಳೆದುಕೊಂಡಿದ್ದಾರೆ. ಶೀಲಹಳ್ಳಿ ಸೇತುವೆ ಮುಳುಗಡೆ ಆಗಿದ್ದು, ಹಂಚಿನಾಳ, ಯಳಗುಂದಿ, ಯರಗೋಡಿ, ಕಡದರಗಡ್ಡಿ ಸೇರಿದಂತೆ ನಡುಗಡ್ಡೆ ಪ್ರದೇಶದ ಜನತೆ ತಾಲೂಕು, ಜಿಲ್ಲಾ ಕೇಂದ್ರದ ಸಂಪರ್ಕ ಕಳೆದುಕೊಂಡು ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ. ರಾಯಚೂರು ಜಿಲ್ಲೆಯ ಹೂವಿನಹೆಡಗಿ ಸೇರಿದಂತೆ ಕೆಲ ಸೇತುವೆಗಳು ಮುಳುಗಡೆ ಅಗುವ ಭೀತಿ ಎದುರಾಗಿದೆ.