ರಾಯಚೂರು: ನಾರಾಯಣಪುರ ಜಲಾಶಯದಿಂದ 5 ಲಕ್ಷ ಕ್ಯುಸೆಕ್ಗಿಂತ ಹೆಚ್ಚು ನೀರು ಹರಿಬಿಟ್ಟಿರುವ ಕಾರಣ ಗುರ್ಜಾಪುರದ ಸುಮಾರು 280 ಜನರು ಹಾಗೂ ಅರಶಣಗಿ ಗ್ರಾಮದ 15ಕ್ಕೂ ಹೆಚ್ಚು ಕುಟುಂಬಗಳನ್ನು ಜೆಗರ್ಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಥಳಾಂತರಿಸಲಾಗಿದೆ.
ಗಂಜಿ ಕೇಂದ್ರಕ್ಕೆ ಮಹಿಳೆಯರು, ವೃದ್ಧರು, ಮಕ್ಕಳು ತಮ್ಮ ಉಟ್ಟ ಬಟ್ಟೆ ಹಾಗೂ ದವಸ ಧಾನ್ಯಗಳೊಂದಿಗೆ ಸ್ಥಳಾಂತವಾಗಿದ್ದು, ತಮ್ಮ ಮನೆಯ ನೆನಪಿನಲ್ಲಿಯೇ ಕುಳಿತು ಪರಸ್ಪರ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂತು.
ಇತ್ತ ದೇವದುರ್ಗ ತಾಲೂಕಿನ ಅಂಜಳ ಗ್ರಾಮದ ಗ್ರಾಮಸ್ಥರಿಗೆ ಕರ್ನಾಟಕ ರಾಜ್ಯ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘ ಮತ್ತು ರಾಯಚೂರು ಜಿಲ್ಲಾ ಶಾಖೆ ವತಿಯಿಂದ ಬ್ರೆಡ್ ಪ್ಯಾಕೆಟ್‌ಗಳನ್ನ ವಿತರಿಸಲಾಯಿತು. ಮನೆ-ಮಠ ಕಳೆದುಕೊಂಡು ಗಂಜಿ ಕೇಂದ್ರದಲ್ಲಿ ವಾಸವಾಗಿರುವ ಸಂತ್ರಸ್ತರಿಗೆ ದಾನಿಗಳು , ಸಂಘ-ಸಂಸ್ಥೆಗಳು ಸಹಾಯ ಹಸ್ತ ಚಾಚುತ್ತಿವೆ.