ರಾಯಚೂರು: ಬೃಹತ್ ಶಾಖೋತ್ಪನ್ನ ಕೇಂದ್ರ(ಆರ್‌ಟಿಪಿಎಸ್)ದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ತಾಲೂಕಿನ ಶಕ್ತಿನಗರದಲ್ಲಿರುವ ಆರ್ಟಿಪಿಎಸ್ನಲ್ಲಿ ಮಂಗಳವಾರ ಸಂಜೆ ಈ ಅಗ್ನಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ. ಹಾನಿ ಸಂಭವಿಸಿದೆ.
ಕೇಂದ್ರದಲ್ಲಿ 210 ಮೆಗಾವ್ಯಾಟ್ ಸಾಮರ್ಥ್ಯದ 4ನೇ ಘಟಕದ ವಿದ್ಯುತ್ ಪರಿವರ್ತಕದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಪರಿವರ್ತಕದಲ್ಲಿ ಬೆಂಕಿಯಿಂದ ಧಗಧಗನೆ ಉರಿದು ಕೇಂದ್ರದಲ್ಲಿ ದಟ್ಟವಾದ ಹೊಗೆ ಆವರಿಸಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಪರಿವರ್ತಕದಲ್ಲಿ ಆಯಿಲ್ ಲಿಕೇಜ್ ಅಥವಾ ಶಾರ್ಟ್ ಸರ್ಕ್ಯೂಟ್ನಿಂದ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದೆ.
ಕೊರೊನಾ ಹಿನ್ನೆಲೆ ಕಳೆದ 5 ತಿಂಗಳನಿಂದ 4ನೇ ಘಟಕ ಸೇರಿದಂತೆ ಉಳಿದ ಘಟಕಗಳ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಇತ್ತೀಚೆಗೆ ವಿದ್ಯುತ್ ಬೇಡಿಕೆ ಕೇಳಿಬರುತ್ತಿರುವುದರಿಂದ ಘಟಕವನ್ನ ಪುನಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ನಡುವೆ 4ನೇ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆತಂಕ ಮೂಡಿಸಿದೆ. ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ.
ಅದೃಷ್ಟವಶಾತ್ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಬದಲಾಗಿ ವಿದ್ಯುತ್ ಪರಿವರ್ತಕ ಅಗ್ನಿ ಆಹುತಿಯಾಗಿರುವುದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ಆರ್‌ಟಿಪಿಎಸ್ ಅಧಿಕಾರಿಗಳು ಸಹ ಸ್ಥಳಕ್ಕೆ ದೌಡಹಿಸಿದ್ದು, ಬೆಂಕಿಯನ್ನ ಅಗ್ನಿಶಾಮಕ ಸಿಬ್ಬಂದಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ಶಕ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.