ರಾಯಚೂರು: ಕೇಂದ್ರ ಸರ್ಕಾರಕ್ಕೆ ರಾಹುಲ್ ಪಾದಯಾತ್ರೆ ಭಯವಿದೆ. ರಾಜ್ಯದಲ್ಲಿ ನನ್ನ ಭಯವಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಹೊರವಲಯದ ಯರಮರಸ್ ಬಳಿಯ ವಿವಿಐಪಿ ಸರ್ಕ್ಯೂಟ್ ಹೌಸ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಕ್ಯತೆಗಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಯಾತ್ರೆಯಿಂದ ಕೇಂದ್ರ ಸರ್ಕಾರಕ್ಕ ಭಯ ಉಂಟಾಗಿದೆ. ಇತ್ತ ರಾಜ್ಯದಲ್ಲಿ ನನ್ನ ಮೇಲೆ ಭಯವಿದೆ. ಅದಕ್ಕಾಗಿಯೇ ಅವರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರದ ಅವಧಿಯಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಪೀಠಿಕೆ ಹಾಕಲಾಯಿತು. ಯಡಿಯೂರಪ್ಪ ಸಿಎಂ ಆಗಿದ್ದಾಗಲೇ ನ್ಯಾ. ನಾಗಮೋಹನ್ ದಾಸ್ ವರದಿ ಸಲ್ಲಿಸಲಾಗಿತ್ತಾದರೂ, ಎರಡು ವರ್ಷ ಮೂಲೆಗೆ ಸೇರಿತ್ತು. ಈಗ ಬಿಜೆಪಿ ತಾನೇ ಮೀಸಲು ಹೆಚ್ಚಳ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಸದಾಶಿವ ಆಯೋಗದ ವರದಿ ಜಾರಿಗೆ ಬದ್ಧ : ಇನ್ನು ಸದಾಶಿವ ಆಯೋಗದ ವರದಿ ಜಾರಿಗೆ ತಡವಾಗಿದೆ. ವರದಿ ಸರ್ಕಾರದ ಮುಂದೆ ಮಂಡನೆಯೇ ಆಗಿಲ್ಲ. ಭೋವಿ, ಕೊರಚ, ಕೊರಮ ಮತ್ತಿತರರು ವಿರೋಧ ವ್ಯಕ್ತಪಡಿಸಿದ್ದರಿಂದ ಇದು ಮಂಡನೆಯಾಗಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿಗೆ ಬದ್ಧ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವರದಿ ಜಾರಿಗೆ ತರಲಾಗುವುದು ಎಂದು ಹೇಳಿದರು.
ಮಹಾದಾಯಿ ಕುರಿತು ಪಕ್ಷದಿಂದ ಯಾತ್ರೆ : ಇನ್ನು ಕೃಷ್ಣಾ ಮೂರನೇ ಹಂತ, 371(J), ಮಹಾದಾಯಿ ಕುರಿತು ಪಕ್ಷದಿಂದ ಯಾತ್ರೆಗೆ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಮೂರು ತಂಡಗಳಾಗಿ ಪಕ್ಷದ ಪ್ರಚಾರ ರಥಯಾತ್ರೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಂಚಾರ ನಡೆಯಲಿದೆ. ಇನ್ನು ಜನಸಂಕಲ್ಪ ಯಾತ್ರೆ ಬಗ್ಗೆ ನಾವು ತಲೆಕೆಡಿಸಿಕೊಂಡಿಲ್ಲ. ಅವರೇನಾದರೂ ಮಾಡಲಿ. ನಾವು ನಮ್ಮ ಪಕ್ಷದ ಬಗ್ಗೆ ಮಾತ್ರ ಗಮನಕೊಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಡಿಫೆನ್ಸ್ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ನಕಲು: 28 ಜನರ ವಿರುದ್ಧ ದೂರು