ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಕೊರೊನಾ ಸೋಂಕು ಹರಡುವ ಭೀತಿ ಹೆಚ್ಚಾಗಿರುವುದರಿಂದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ಹಟ್ಟಿ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಕಾರ್ಮಿಕರು ಹಾಗೂ ಕ್ಯಾಂಪ್ ಏರಿಯಾದಲ್ಲಿ ಕೆಲಸ ಮಾಡುವ ಇಬ್ಬರು ಸೇರಿದಂತೆ ಹಟ್ಟಿ ಗ್ರಾಮ, ಮಲ್ಲಾಪುರ, ಗುಡದನಾಳದಲ್ಲಿ ಒಟ್ಟು 7 ಪ್ರಕರಣಗಳು ವರದಿ ಆಗಿರುವುದು ಕಾರ್ಮಿಕರಲ್ಲಿ ಆತಂಕ ಹೆಚ್ಚಿಸಿದೆ. ಈ ಹಿನ್ನೆಲೆ ರಾಯಚೂರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮುತುವರ್ಜಿ ವಹಿಸಿ ಶುಕ್ರವಾರ ದಿಢೀರ್ ಭೇಟಿ ನೀಡಿ ಕೋವಿಡ್ ಸೋಂಕಿತರ ಕುರಿತು ವಹಿಸಬೇಕಾದ ಎಚ್ಚರಿಕೆ, ಮುಂದೆ ಸೋಂಕು ಹರಡದಂತೆ ವಹಿಸಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಹಟ್ಟಿ ಚಿನ್ನದ ಗಣಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದ್ದಾರೆ.
ಬಳ್ಳಾರಿ ಜಿಲ್ಲೆ ಜಿಂದಾಲ್ ಹಾಗೂ ಮೈಸೂರು ಜಿಲ್ಲೆಯ ಜುಬಿಲಂಟ್ ಕಂಪನಿಗಳಲ್ಲಿ ಆಗಿರುವ ಸ್ಥಿತಿ ಇಲ್ಲಿಯೂ ಆಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಸೂಚಿಸಿದ್ದಾರೆ.
ಈ ಮಧ್ಯೆ ಹಟ್ಟಿ ಚಿನ್ನದ ಗಣಿ ಕಾರ್ಮಿಕನೋರ್ವನ ತಂದೆ ಜೂನ್ 11ರಂದು ಮೃತಪಟ್ಟಿದ್ದು, ಆತನಿಗೆ ಕೋವಿಡ್-19 ಲಕ್ಷಣಗಳಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಹಟ್ಟಿ ಚಿನ್ನದ ಗಣಿಯ 4 ಸಾವಿರ ಕಾರ್ಮಿಕರ ಭವಿಷ್ಯದ ರಕ್ಷಣೆಗೆ ಕಂಪನಿ ಅಧಿಕಾರಿಗಳು ಎಚ್ಚರಿಕೆ ವಹಿಸುತ್ತಿದ್ದಾರೆ.