ರಾಯಚೂರು: ಲಿಂಗಸುಗೂರು ತಾಲೂಕು ಗುಂಡಲಬಂಡ ಜಲಪಾತದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ತಂದೆ-ಮಗನ ಮೃತದೇಹಗಳು ಪತ್ತೆಯಾಗಿವೆ.
ದೇವದುರ್ಗ ತಾಲೂಕು ಮೂಡಲಗುಂಡ ನಿವಾಸಿಗಳಾದ ಕೃಷ್ಣಪ್ಪ ನಾಯಕ (35) ಹಾಗೂ ಅವರ ಮಗ ಧನುಷ್ (5) ಗುರುವಾರ ಜಲಪಾತ ವೀಕ್ಷಣೆಗೆ ಬಂದಿದ್ದರು. ಈ ವೇಳೆ ಏಕಾಏಕಿ ನೀರು ಹೆಚ್ಚಾಗಿದ್ದರಿಂದ ಇಬ್ಬರು ಕೊಚ್ಚಿ ಹೋಗಿದ್ದರು. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ, ತಂದೆ-ಮಗನ ಮೃತದೇಹ ಪತ್ತೆ ಹಚ್ಚಿದ್ದಾರೆ. ಜಲಪಾತದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ತಂದೆ-ಮಗ ಕಾಣೆಯಾಗಿದ್ದಾರೆ ಎಂದು ಮೃತನ ಪತ್ನಿ ರೇಣುಕಾ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಇದು ಅಸಹಜ ಸಾವು, ಈ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಮೆಂಟ್ ಕಲಾವಿದ ಕೃಷ್ಣಪ್ಪ:
ಮೃತ ಕೃಷ್ಣಪ್ಪ ನಾಯಕ ಸಿಮೆಂಟ್ ಕಲಾಕೃತಿ ರಚಿಸುವ ಕೆಲಸ ಮಾಡುತ್ತಿದ್ದರು. ಮಹಾರಾಷ್ಟ್ರದ ಕನ್ನೇರಿ ಮಠ ಸೇರಿದಂತೆ ವಿವಿಧೆಡೆ ಸಿಮೆಂಟಿನ ಕಾಲಕೃತಿಗಳನ್ನು ರಚಿಸಿದ್ದೇವೆ. ಜೊತೆಗೆ ಅವರೊಬ್ಬ ನಿಸರ್ಗ ಪ್ರಿಯರಾಗಿದ್ದರು. ಜಲಪಾತ, ಅರಣ್ಯ ಚಾರಣ, ನಿಸರ್ಗದತ್ತ ಪ್ರೇಕ್ಷಣಿಯ ಸ್ಥಳಗಳ ಪರ್ಯಟನೆ ಅವರ ಹವ್ಯಾಸವಾಗಿತ್ತು. ಓರ್ವ ಉತ್ತಮ ಕಲಾವಿದನನ್ನು ಕಳೆದುಕೊಂಡಂತಾಗಿದೆ. ಸರ್ಕಾರ ಇವರ ಕುಟುಂಬದ ನೆರವಿಗೆ ಬರಬೇಕು ಎಂದು ಅಯ್ಯನಗೌಡ ಪಾಟೀಲ ಕಂಬನಿ ಮನವಿ ಮಾಡಿದ್ದಾರೆ.